ಬಣ್ಣದ ಮಾತಿಗೆ ಮರುಳಾಗಿ ಮಹೇಂದ್ರ ಕುಮಾರ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ: ಕಾಂಗ್ರೆಸ್ ನಾಯಕರಿಗೆ ಕ್ರೈಸ್ತರ ಎಚ್ಚರಿಕೆ
ನ್ಯೂಸ್ ಕನ್ನಡ ವರದಿ(10-04-2018): ಮಾಜಿ ಭಜರಂಗ ದಳದ ನಾಯಕ ಮಹೇಂದ್ರ ಕುಮಾರ್ ಹಿಂದೆ ಮಾಡಿದ ಚರ್ಚ್ ದಾಳಿಯನ್ನು ಮರೆತು ಆತನ ಬಣ್ಣದ ಮಾತಿನ ಮೋಡಿಗೆ ಮರುಳಾಗುವ ಮೂಲಕ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಕರಾವಳಿಯ ಕ್ರೈಸ್ತ ಮುಖಂಡರು ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಹೇಂದ್ರ ಕುಮಾರ್ ಸಿಎಂ ಸಿದ್ಧರಾಮಯ್ಯ ಅವರನ್ನು ಹೊಗಲಿ ಅಪದ್ಭಾಂದವ ಎಂದಿದ್ದರು. ಈ ಭಾಷಣದ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ವೈರಲಾಗುತ್ತಿದೆ. ಈ ಕಾರಣದಿಂದಾಗಿ ಮಹೇಂದ್ರ ಕುಮಾರ್ ಕಾಂಗ್ರೆಸ್ ಸೇರ್ಪಡೆಯ ಕುರಿತು ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕ್ರೈಸ್ತ ಸಮುದಾಯದವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಮಹೇಂದ್ರ ಕುಮಾರ್ ಮಂಗಳೂರಿನಲ್ಲಿ ಚರ್ಚ್ ದಾಳಿಯ ಘಟನೆ ನಡೆದ ಮೇಲೆ ನಾನೇ ಮಾಡಿಸಿದ್ದು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇತಂಹ ವ್ಯಕ್ತಿಗಳನ್ನು ಕ್ರೈಸ್ತ ಸಮುದಾಯ ಕ್ಷಮಿಸುವ ಪ್ರಶ್ನೆ ಇಲ್ಲ, ಚರ್ಚ್ ದಾಳಿಯ ನೋವು ನಮ್ಮಲ್ಲಿ ಇನ್ನು ಮರೆಯಾಗಿಲ್ಲ ಈ ಕಾರಣದಿಂದಾಗಿ ಕಾಂಗ್ರೇಸ್ ಪಕ್ಷಕ್ಕೆ ಮಹೇಂದ್ರ ಕುಮಾರ್ ಅವರನ್ನು ಸೇರಿಸಿಕೊಳ್ಳಬಾರದು, ಒಂದು ವೇಳೆ ಸೇರಿಸಿಕೊಂಡರೆ ಸೂಕ್ತ ಉತ್ತರವನ್ನು ರಾಜ್ಯದಲ್ಲಿನ ಕ್ರೈಸ್ತರು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.