ಏಕ ದೇವ ವಿಶ್ವಾಸಿಗಳು ದೇವಸ್ಥಾನಕ್ಕೆ ಬಂದು ಯಾಕೆ ಪ್ರಸಾದ ಸ್ವೀಕರಿಸಬೇಕು?: ಸಚಿವ ಖಾದರ್ ನ್ನು ಮತ್ತೊಮ್ಮೆ ಟೀಕಿಸಿದ ಕಲ್ಲಡ್ಕ ಭಟ್
ನ್ಯೂಸ್ ಕನ್ನಡ ವರದಿ(10-4-2018): ಅಲ್ಲಾಹ್ ಹೊರತು ಬೇರೆ ದೇವರಿಲ್ಲ ಎಂದು ಏಕ ದೇವ ವಿಶ್ವಾಸದಲ್ಲಿ ನಂಬಿಕೆಯಿಡುವ ಸಚಿವ ಖಾದರ್ ಯಾಕೆ ದೇವಸ್ಥಾನಕ್ಕೆ ಬಂದು ಪ್ರಸಾದವನ್ನು ಸ್ವೀಕರಿಸಬೇಕು ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತೊಮ್ಮೆ ಸಚಿವರನ್ನು ಟೀಕಿಸಿದ್ದಾರೆ. ಸಚಿವ ಖಾದರ್ ನಿನ್ನೆ ಮತ್ತೊಮ್ಮೆ ಕೊರಗಜ್ಜನ ಸನ್ನಿದಾನಕ್ಕೆ ಭೇಟಿ ನೀಡಿದುದನ್ನು ಪ್ರಭಾಕರ್ ಭಟ್ ಕಟು ಶಬ್ದಗಳಿಂದ ಖಂಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸಚಿವ ಖಾದರ್ ಕೊರಗಜ್ಜನ ಸನ್ನಿದಾನಕ್ಕೆ ಭೇಟಿ ನೀಡಿದಾಗ ಪ್ರಸಾದವನ್ನು ನೀಡಿದ ಅರ್ಚಕರಿಗೆ ‘ ತಲೆ ಸರಿಯಿಲ್ಲದವ’ ಎಂದು ನಿಂದಿಸಿ ಕಲ್ಲಡ್ಕ ಭಟ್ ವಿವಾದಕ್ಕೆ ಕಾರಣರಾಗಿದ್ದರು. ಇದೀಗ ಎರಡನೇ ಬಾರಿ ಸಚಿವರ ಭೇಟಿಯ ಕುರಿತು ಪ್ರತಿಕ್ರಯಿಸಿದ ಭಟ್ ‘ ದೇವಸ್ಥಾನಗಳು ಪವಿತ್ರ ಸ್ಥಳವಾಗಿದ್ದು, ಗೋಮಾಂಸ ಭಕ್ಷಕರಿಗೆ ಅಲ್ಲಿ ಪ್ರವೇಶವಿಲ್ಲ. ನನ್ನ ಮಾತುಗಳಿಗೆ ನಾನು ಅಚಲನಾಗಿದ್ದೇನೆ. ಈ ವಿಚಾರದಲ್ಲಿ ನಾನು ಜೈಲಿಗೆ ಹೋದರೂ ಪರವಾಗಿಲ್ಲ’ ಎಂದಿದ್ದಾರೆ.
ನಾನು ಈ ಮಾತುಗಳನ್ನು ಸರಿಯಾಗಿ ಆಲೋಚಿಸಿಯೇ ಹೇಳಿದ್ದೇನೆ. ಇದು ನನ್ನ ದುಡಿಕಿನ ಹೇಳಿಕೆ ಎಂದು ತಿಳಿಯುವುದು ಬೇಡ. ದೇವರ ಮೇಲೆ ಭಕ್ತಿಯಿಲ್ಲದ ಗೋಮಾಂಸ ಭಕ್ಷಕ ಕೇವಲ ಮತ ಗಳಿಸುವ ಉದ್ದೇಶದಿಂದ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದವನ್ನು ಯಾಕೆ ಸ್ವೀಕರಿಸಬೇಕು ಎಂದು ಪ್ರಶ್ನಿಸಿದ್ದಾರೆ.