ರೈತರ ಪ್ರತಿಭಟನೆ ಇನ್ನಷ್ಟು ತೀವ್ರ; ಇಂದು ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿ, ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಿರುವ ರೈತರು

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ನಡೆಸಿದ್ದ ಟ್ರ್ಯಾಕ್ಟರ್​ ಜಾಥಾದ ದಿಕ್ಕು ಬದಲಾಗಿದ್ದು, ದಿನಗಳದಂತೆ ರೈತರ ಹೋರಾಟ ತೀವ್ರ ಪಡೆದುಕೊಳ್ಳುತ್ತಿದೆ. ದೇಶದಾದ್ಯಂತ ಹೆದ್ದಾರಿ ತಡೆದು (ಚಕ್ಕಾ ಜಾಮ್) ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ದೆಹಲಿಗೆ ನುಗ್ಗದಂತೆ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರರಾಜಧಾನಿಯಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಬಳಿಕ ರೈತರಿಗೆ ದೇಶ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿದ್ದು, ಇದರಿಂದ ಕುಗ್ಗದ ರೈತರು ಮತ್ತೆ ಕೇಂದ್ರ ಸರ್ಕಾರದ ಮೂರು ಕಾಯ್ದೆಗಳ ವಿರುದ್ಧ ಸಿಡಿದೆದ್ದಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳನ್ನು ರೈತರು ಬಂದ್ ಮಾಡಲಿದ್ದಾರೆ.

ಪ್ರತಿಭಟನೆ ವೇಳೆ ರಸ್ತೆಗಳಲ್ಲಿ ಸಿಲುಕಿಕೊಳ್ಳುವ ಜನರಿಗೆ ತಿಂಡಿ ಹಾಗೂ ನೀರನ್ನು ರೈತರೇ ನೀಡಲಿದ್ದಾರೆಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕೈತ್ ಅವರು ಹೇಳಿದ್ದಾರೆ.

3 ಗಂಟೆಗೆ ರಸ್ತೆ ತಡೆ ಮುಗಿಯುವ ಸಂಕೇತವಾಗಿ 1 ನಿಮಿಷ ವಾಹನಗಳ ಹಾರ್ನ್ ಮಾಡಲಾಗುತ್ತದೆ. ದೆಹಲಿ ಹೊರವಲಯದಲ್ಲಿ ಈಗಾಗಲೇ ರಸ್ತೆ ತಡೆ ನಡೆಸುತ್ತಿದ್ದೇವೆ. ಹೀಗಾಗಿ ದೆಹಲಿ ನಗರದಲ್ಲಿ ಪ್ರತಿಭಟನೆ ಇರುವುದಿಲ್ಲ. ಒಂದು ವೇಳೆ ದೆಹಲಿ ಹೊರವಲಯದ ರೈತರನ್ನು ಪೊಲೀಸರು ಶನಿವಾರ ಸಾಮೂಹಿಕವಾಗಿ ಬಂಧಿಸಿದರೆ, ಕೂಡಲೇ ಗಡಿಭಾಗದಲ್ಲಿರುವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರೈತುರ ದೆಹಲಿ ಗಡಿಗೆ ದೌಡಾಯಿಸಬೇಕು. ಹಾಗಾಗಿ ಆ ರಾಜ್ಯಗಳಲ್ಲಿ ರಸ್ತೆ ತಡೆ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.

ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ರೈತ ಸಂಘಟನೆಗಳು ರಸ್ತೆ ತಡೆ ನಡೆಸಲು ಸಿದ್ಧತೆ ಮಾಡಿಕೊಂಡಿವೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಇನ್ನೂ ಫಲ ದೊರಕದಿರುವುದರಿಂದ ದೇಶದಾದ್ಯಂತ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಮುಂದಾಗಿದ್ದಾರೆ.

ಹೈ ಅಲರ್ಟ್
ರೈತರು ಚಕ್ಕಾ ಜಾಮ್ ನಡೆಸಲು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ದೆಹಲಿ ಗಡಿಗಳಲ್ಲಿ ಭಾರೀ ಸಂಖ್ಯೆಯ ಪೊಲೀಸ್ ಪಡೆ ನಿಯೋಜಿಸಿ, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಘಾಜಿಪುರ, ಸಿಂಘು, ಟಿಕ್ರಿ ಸೇರಿದಂತೆ ದೆಹಲಿಯ ಉತ್ತರ ಜಿಲ್ಲೆಗಳ ಗಡಿಗಳ ರಸ್ತೆಗೆ ಅಡ್ಡಲಾಗಿ ಹಲವು ಹಂತದ ಬ್ಯಾರಿಕೇಡ್, ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ. ರಸ್ತೆಗೆ ಮೊಳೆಗಳನ್ನೂ ಹೊಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಜನವರಿ 26 ರಂದು ಗಣರಾಜ್ಯೋತ್ಸವದಂದು ರೈತರು ನಡೆಸಿದ್ದ ಟ್ರ್ಯಾಕ್ಟರ್ ಪರೇಡ್ ನಲ್ಲಿ ಭಾರೀ ಹಿಂಸಾಚಾರ ಉಂಟಾದ ಹಿನ್ನೆಲೆಯಲ್ಲಿ ಎಚ್ಚೆತ್ತ ದೆಹಲಿ ಪೊಲೀಸ್ ಮುಂಜಾಗ್ರತಾ ಕ್ರಮವಾಗಿ ಈ ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.

ದೆಹಲಿಯ ಸಂಸತ್ತು, ಇಂಡಿಯಾ ಗೇಟ್ ನಲ್ಲಿಯೂ ಭಾರೀ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಪೊಲೀಸ್ ಪಡೆಯು ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣು, ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ರಸ್ತೆ ತಡೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ನಡೆದಿದ್ದು, ಭಾರೀ ಭದ್ರತೆಗೆ ಕೇಂದ್ರ ಸರ್ಕಾರವೇ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *