ಲವ್ ಜಿಹಾದ್ ಆರೋಪ ಧಿಕ್ಕರಿಸಿ ಮದುವೆಯಾದ ಯುಸಿಎಸ್ಸಿ ಟಾಪರ್ಸ್: ಯುವ ಜೋಡಿಗೆ ಪ್ರಶಂಸೆಗಳ ಸುರಿಮಳೆ
ನ್ಯೂಸ್ ಕನ್ನಡ ವರದಿ(10-04-2018): ಲವ್ ಜಿಹಾದ್ ಆರೋಪಗಳನ್ನು ಧಿಕ್ಕರಿಸಿ ನವ ಜೀವನಕ್ಕೆ ಕಾಲಿಟ್ಟ 2015ರ ಯುಪಿಎಸ್ಸಿ ಪರೀಕ್ಷೆಯ ಟಾಪರ್ ಟೀನಾ ದಾಬಿ ಹಾಗೂ ಅದೇ ಬ್ಯಾಚ್ ನ ದ್ವೀತಿಯ ರ್ಯಾಂಕ್ ಹೋಲ್ಡರ್ ಅತ್ತರ್ ಅಮೀರುಲ್ ಶಾಫಿ ಅವರುಗಳಿಗೆ ದೇಶಾದ್ಯಂತ ಪ್ರಸಂಶೆಗಳ ಸುರಿಮಳೆ ಹರಿದು ಬರುತ್ತಿದೆ.
ಮೂರು ವರ್ಷಗಳ ಹಿಂದೆ ನಡೆದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರಿಗೆ ಪರಸ್ಪರ ಪ್ರೇಮಾಂಕುರವಾಯಿತು. ಈ ವಿಷಯವನ್ನು ತನ್ನ ಟ್ವೀಟರ್ ಖಾತೆಯ ಮೂಲಕ ಹೇಳಿಕೊಂಡ ಟೀನಾ ದಾಬಿಗೆ ಸಾಮಾಜಿಕ ತಾಣದಲ್ಲಿ ಭಾರಿ ವಿರೋಧಗಳು ವ್ಯಕ್ತವಾಗಿದ್ದವು. ಯಾವುದೇ ವಿರೋಧಕ್ಕೂ ಜಗ್ಗದ ಯುವ ಜೋಡಿಯು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಶ್ರೀನಗರದ ಹೋಟೆಲ್ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಗಣ್ಯ ವ್ಯಕ್ತಿಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಶಭ ಹಾರೈಸಿದ್ದಾರೆ. ‘2015ನೇ ಯುಪಿಎಸ್’ಸಿ ಟಾಪರ್ ಗಳಾದ ಟೀನಾ ದಾಬಿ ಮತ್ತು ಅಮಿರ್ ಉಲ್ ಶಫಿಯವರಿಗೆ ವಿವಾಹದ ಶುಭಾಶಯಗಳು. ನಿಮ್ಮ ಪ್ರೀತಿ ಶಕ್ತಿ ಮತ್ತಷ್ಟು ಹೆಚ್ಚಲಿ. ಅಸಹಿಷ್ಣುತೆ ಹಾಗೂ ಕೋಮು ದ್ವೇಷ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಎಲ್ಲಾ ಭಾರತೀಯರಿಗೂ ನೀವು ಸ್ಫೂರ್ತಿಯಾಗಬಹುದು. ದೇವರು ನಿಮಗೆ ಒಳ್ಳೆಯದು ಮಾಡಲಿ’ಎಂದು ಹೇಳಿದ್ದಾರೆ.