ಬರೋಬ್ಬರಿ 81.18% ಏರಿಕೆಯಾದ ಬಿಜೆಪಿ ಪಕ್ಷದ ಆದಾಯ: ಕುಸಿತಗೊಂಡ ಕಾಂಗ್ರೆಸ್ ಆದಾಯ!
ನ್ಯೂಸ್ ಕನ್ನಡ ವರದಿ-(10.04.18): ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರವು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಆದಾಯ ಪ್ರಮಾಣದಲ್ಲಿ ಬರೋಬ್ಬರಿ 81.18 ಶೇಖಡಾ ಹೆಚ್ಚಳವಾಗಿದೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆದಾಯದಲ್ಲಿ ಮೊದಲಿಗಿಂತಲೂ 14 ಶೇಖಡಾ ಪ್ರಮಾಣ ಕುಸಿತ ಕಂಡು ಬಂದಿದೆ ಎಂದು ಸರಕಾರೇತರ ಸಂಸ್ಥೆಯಾದ ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಪೋಟ್ರ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ ಚುನಾವನಾ ಮತ್ತು ರಾಜಕೀಯ ಸುಧಾರಣೆಗಾಗಿ ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಪೋಟ್ರ್ಸ್ ಸಂಸ್ಥೆಯು ಶ್ರಮಿಸುತ್ತಿದೆ.
ವರದಿ ಪ್ರಕಾರ ಬಿಜೆಪಿ, ಚುನಾವಣಾ ಆಯೋಗದ ಮುಂದೆ ತನ್ನ ಆದಾಯ 1,034.27 ಕೋಟಿ ರೂ. ಎಂದು ಘೋಷಿಸಿಕೊಂಡಿದೆ. ಈ ಹಿಂದಿನ ಘೋಷಣೆಗಿಂತ ಇದು 463.41 ಕೋಟಿ ರೂ. ಜಾಸ್ತಿ ಇದೆ. 2016-17ರಲ್ಲಿ ತಾನು 710.057 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಬಿಜೆಪಿ ಘೋಷಿಸಿಕೊಂಡಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಮಾಡಿರುವ ಖರ್ಚು 321.66 ಕೋಟಿ ರೂ. ಆದರೆ ಈ ಮೊತ್ತವು, ಅದರ ಈ ಅವಧಿಯ ಆದಾಯಕ್ಕಿಂತ 96.30 ಕೋಟಿ ರೂ. ಹೆಚ್ಚು ಎಂಬುದು ಗೊತ್ತಾಗಿದೆ.