ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ: ಬೃಹತ್ ಮೊತ್ತ ಪೇರಿಸಿದ ಕೆಕೆಆರ್!
ನ್ಯೂಸ್ ಕನ್ನಡ ವರದಿ-(10.04.18): ಚೆನ್ನೈನಲ್ಲಿ ಒಂದೆಡೆ ಕಾವೇರಿ ನೀರಿನ ಪ್ರತಿಭಟನೆ ನಡೆಯುತ್ತಿದ್ದು, ಹೀಗಾಗಿ ಐಪಿಎಲ್ ಗೆ ಅವಕಾಶ ನೀಡಬಾರದು ಎಂಬುವುದರ ಕುರಿತು ಚರ್ಚೆಗಳು ನಡೆಯುತ್ತಿದೆ ಮತ್ತು ಪ್ರತಿಭಟನೆಯೂ ನಡೆದಿದೆ. ಈ ನಡುವೆ ಇದೀಗ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯಾಟವು ನಡೆಯುತ್ತಿದೆ. ಇದೀಗ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡವು ಆಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮಿಂಚಿದ್ದ ಸುನೀಲ್ ನರೈನ್ ಮೊದಲು ಎರಡು ಸಿಕ್ಸರ್ ಬಾರಿ ಹರ್ಭಜನ್ ಸಿಂಗ್ ಎಸೆತಕ್ಕೆ ಔಟ್ ಆದರು. ಬಳಿಕ ಕ್ರಿಸ್ ಲಿನ್(22) ಮತ್ತು ರಾಬಿನ್ ಉತ್ತಪ್ಪ(29) ಗಮನಾರ್ಹ ಪ್ರದರ್ಶನ ತೋರಿದರು. ಬಳಿಕ ಆಗಮಿಸಿದ ಆಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಚೆನ್ನೈ ತಂಡದ ಬೌಲರ್ ಗಳ ಬೆವರಿಳಿಸಿದ ರಸೆಲ್ 36 ಎಸೆತಗಳಲ್ಲಿ 88ರನ್ ಗಳಿಸಿ 11 ಸಿಕ್ಸರ್ ಗಳೊಂದಿಗೆ ತಂಡದ ಮೊತ್ತವನ್ನು 202 ರನ್ ಗಳಿಗೆ ಹೆಚ್ಚಿಸಲು ನೆರವಾದರು.