‘ಯೋಗಿ ರಾಜ್’ನಲ್ಲಿ ಹೇಗಿದೆ ನೋಡಿ ಅತ್ಯಾಚಾರದ ಆರೋಪಿ ಬಿಜೆಪಿ ಶಾಸಕನ ‘ಗೂಂಡಾ ದರ್ಬಾರ್’!
ನ್ಯೂಸ್ ಕನ್ನಡ ರೆಬೆಲ್ ಟಾಕ್
ಸಾಮಾನ್ಯವಾಗಿ ರಾಜಕೀಯಕ್ಕೆ ಬಂದಂತಹ ಪುಢಾರಿಗಳು ಅಥವಾ ಅವರ ಮಕ್ಕಳು, ಸಂಬಂಧಿಕರು ತಮ್ಮ ರಾಜಕೀಯ ಪ್ರಭಾವದಿಂದ ಹಲವಾರು ಸಂವಿಧಾನ ವಿರೋಧಿ ಕೆಲಸ ಮಾಡಿದರೂ, ಕಾನೂನು ಕೈಗೆತ್ತಿಕೊಂಡರೂ ಯಾವುದೇ ಶಿಕ್ಷೆಯಿಲ್ಲದೇ ತಪ್ಪಿಸಿಕೊಳ್ಳುವುದು ನಾವು ನೋಡಿರುತ್ತೇವೆ. ರಾಜಕೀಯ ವ್ಯಕ್ತಿಗಳ ಗೂಂಡಾಗಿರಿಗೆ ಬೆದರಿ ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದೇ ಇಲ್ಲ, ಅಕಸ್ಮಾತ್ ಕೆಲವೊಮ್ಮೆ ದೂರು ದಾಖಲಾದರೆ ಅದನ್ನು ಕಸದ ಬುಟ್ಟಿಗೆ ಎಸೆದಂತೆ ಕಾಟಾಚಾರಕ್ಕೆ ಎಂಬಂತೆ ಇಂತಹ ಹಣವಂತ ಭೃಷ್ಟ ರಾಜಕಾರಣಿಗಳ ಗುಲಾಮರಾಗಿರುವ ಪೊಲೀಸರು ಕ್ರಮ ಕೈಗೊಳ್ಳದೇ ಸುಮ್ಮನಿರುತ್ತಾರೆ.
ನಮ್ಮದೇ ಕರ್ನಾಟಕದ ರಾಜಧಾನಿ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲ್ಪಡ್ ಮಹಮ್ಮದ್ ಹ್ಯಾರಿಸ್ ಮತ್ತು ಅವರ ಸ್ನೇಹಿತರು ಹೊಟೇಲ್ವೊಂದರಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನೆನಪಿರಬಹುದು, ನಾನು ಒಬ್ಬ ಶಾಸಕನ ಮಗ, ಪ್ರಭಾವಿ ರಾಜಕಾರಣಿಗಳು ನನ್ನ ಜೊತೆ ಉತ್ತಮ ಒಡನಾಟವಿದೆ ಎಂಬ ಮದ ತಲೆಗೆ ಹತ್ತಿ ತನ್ನನ್ನು ತಾನು ‘ಪ್ರಿನ್ಸ್ ನಲ್ಪಡ್’ ಎಂದು ಕರೆಸಿಕೊಂಡು ಶೋಕೀಲಾಲ ಜೀವನ ನಡೆಸುತ್ತಾ ತಾನು ಮಾಡಿದ್ದೇ ಸರಿ ಎಂಬ ಅಹಂಕಾರದೊಂದಿಗೆ ಗೊತ್ತು ಗುರಿಯಿಲ್ಲದಂತೆ ಬೆಳೆದ ನಲ್ಪಡ್ ಮಹಮ್ಮದ್ ಹ್ಯಾರಿಸ್ ತನ್ನ ದೈನಂದಿನ ಶರಾಬು ಕುಡಿದು ಮೋಜು ಮಾಡುವ ಕೆಫೆಯಲ್ಲಿ ಅಮಾಯಕ ವಿದ್ವತ್ ಮೇಲೆ ಕೆಲವೊಂದು ಆಂಧ್ರಪ್ರದೇಶದ ಸಿನಿಮಾಗಳಲ್ಲಿ ತೋರಿಸುವ ರೀತಿ ಭಯಾನಕ ಹಲ್ಲೆ ನಡೆಸುತ್ತಾನೆ, ಅಷ್ಟು ಸಾಲದೆಂಬಂತೆ ಆಸ್ಪತ್ರೆಗೆ ತೆರಳಿ ಅಲ್ಲಿಯೂ ಮನಬಂದಂತೆ ಥಳಿಸುತ್ತಾನೆ ಮತ್ತು ಕರ್ನಾಟಕದಂತಹ ಕರ್ನಾಟಕದಲ್ಲಿಯೂ ಇಂತಹ ಗೂಂಡಾರಾಜ್ ಇದೆ ಎಂಬುವುದನ್ನು ಜಗತ್ತಿಗೆ ತೊರಿಸುತ್ತಾನೆ.
ಆ ಮದತುಂಬಿದ ನಲ್ಪಡ್ ಮಹಮ್ಮದ್ ಹ್ಯಾರಿಸ್ ಈ ಪ್ರಕರಣದಲ್ಲಿಯೂ ತನ್ನನ್ನು ಯಾರು ಏನೂ ಮಾಡಲಾಗದು ಎಂದೇ ಭಾವಿಸಿದ್ದನು ಮತ್ತು ನಲ್ಪಡ್ ಮಹಮ್ಮದ್ ತಂದೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ತನ್ನ ಪುತ್ರನ ಈ ಘನಂಧಾರಿ ಕೆಲಸಕ್ಕೆ ಪೊಲೀಸ್ ದೂರು ದಾಖಲಾಗದಂತೆ ಸಂಧಾನ ಮಾತುಕತೆ ನಡೆಸಲು ಪ್ರಯತ್ನಿಸಿದರೂ ಅದು ಸಾದ್ಯವಾಗದೇ ಮರುದಿನ ಮಾಧ್ಯಮದಲ್ಲಿ ಬ್ರೇಕಿಂಗ್ ನ್ಯೂಸ್ ಆದ ಕಾರಣ ಪ್ರಕರಣ ದಾಖಲಾಯಿತು. ನಲ್ಪಡ್ ಮಹಮ್ಮದ್ ಪ್ರೀತಿಯಿಂದ ‘ಅಂಕಲ್’ ಎಂದು ಕರೆಯುತ್ತಿದ್ದ ಗೃಹ ಸಚಿವ ರಾಮಲಿಂಗ ರೆಡ್ಡಿ ‘ಆರೋಪಿ ಯಾರೇ ಆದರೂ ಸರಿ ಬಿಡುವ ಪ್ರಶ್ನೆಯೇ ಇಲ್ಲ, ಹುಡುಕಿ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂಬ ರಾಜಕೀಯ ಹೇಳಿಕೆಯ ಸ್ಪಷ್ಟನೆ ನೀಡಿದರು.
ಹೆಚ್ಚಿದ ಒತ್ತಡ, ಮಾಧ್ಯಮಗಳಲ್ಲಿ ನಡೆದ ನಿರಂತರ ಚರ್ಚೆ, ರಾಜ್ಯಾದ್ಯಂತ ನಡೆದ ಖಂಡನೆ, ಪ್ರತಿಭಟನೆ, ವಿಪಕ್ಷಗಳಿಂದ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರ ಮತ್ತು ಹಾತೊರೆಯುವಿಕೆ ನೋಡಿದ ನಂತರ ಚುನಾವಣೆ ಹತ್ತಿರದಲ್ಲಿರುವ ಕಾರಣ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು ಎಂಬ ಏಕೈಕ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಹೋದ ನೇರ ವಾರ್ನಿಂಗ್ ನ ಫಲಶ್ರುತಿಯಿಂದ ಎರಡು ದಿನದ ನಂತರ ಪೊಲೀಸರಿಗೆ ಶರಣಾದ, ನಂತರ ಸತತವಾಗಿ ನ್ಯಾಯಾಲಯದಿಂದ ಜಾಮೀನು ಪಡೆಯಲು ಪ್ರಯತ್ನಿಸಿದರೂ ಸಫಲವಾಗದೇ ಇನ್ನೂ ಜೈಲಿನಲ್ಲಿ ಜೈಲೂಟ ಮಾಡುತ್ತಿದ್ದಾನೆ ‘ಪ್ರಿನ್ಸ್ ನಲ್ಪಡ್’. ಈತನ ಮಾಡಿದ ಹಲವಾರು ಕೃತ್ಯಗಳು ಹೊರಬಾರದೇ, ಠಾಣೆ ಮೆಟ್ಟಿಲೇರದೇ ಅಂತ್ಯಕಂಡರೂ ಈ ಒಂದು ಪ್ರಕರಣ ಈತನ ಅಹಂಕಾರ, ಆಕಾಶದಲ್ಲಿ ಹಾರಾಡುತ್ತಿದ್ದ ಮದ ಇಳಿಸಿದೆ, ಇಂತಹ ದಾರಿತಪ್ಪಿದ ಮಾನವೀಯತೆ ಮರೆತ ದುಷ್ಟರು ಇನ್ನೂ ಕೆಲವು ತಿಂಗಳು ಜಾಮೀನು ಪಡೆಯದೇ ಜೈಲಿನಲ್ಲಿ ಕೊಳೆತರೆ ಮುಂದೆ ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುವಾಗ ಹಲವು ಬಾರಿ ಯೋಚಿಸುತ್ತಾರೆ. ಯಾವುದೇ ಒತ್ತಡಕ್ಕೂ ಮಣಿಯದೇ ಇಂತಹ ದುಷ್ಟರಿಗೆ ಜಾಮೀನು ದೊರಕದಂತೆ ನೋಡಿಕೊಂಡಿರುವ ಹೋರಾಡಿದ ವಕೀಲರಿಗೆ ಮತ್ತು ಗಟ್ಟಿಯಾಗಿ ನಿಂತ ನ್ಯಾಯಾಧೀಶರಿಗೆ ಅಭಿನಂದನೆ ಸಲ್ಲಿಸಬೇಕು.
ಇನ್ನು ಮಾತನಾಡುವ ಉತ್ತರ ಪ್ರದೇಶದ ಕಠೋರ ಹಿಂದುತ್ವವಾದಿ ನಾಯಕ ‘ಯೋಗಿ ಆದಿತ್ಯನಾಥ್’ ಸರಕಾರದಲ್ಲಿ ಬಿಜೆಪಿಯ ಶಾಸಕನೊಬ್ಬ ನಡೆಸುತ್ತಿರುವ ಗೂಂಡಾ ದರ್ಬಾರ್ ಬಗ್ಗೆ.
ಏಪ್ರಿಲ್ 8ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನೆಯ ಮುಂದೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸುವ ಘಟನೆ ನಡೆಯುತ್ತದೆ, ಅದು ಮುಖ್ಯಮಂತ್ರಿ ನಿವಾಸವಾಗಿದ್ದ ಕಾರಣ ಮಾಧ್ಯಮದ ಕಣ್ಣಿಗೆ ಕಾಣುತ್ತದೆ ಮತ್ತು ದೊಡ್ಡ ಮಟ್ಟದ ಸುದ್ದಿಯಾಗುತ್ತೆ, ಆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆ ಯುವತಿ ಆಘಾತಕಾರಿ ವಿಷಯಗಳನ್ನು ಬಹಿರಂಗಗೊಳಿಸುತ್ತಾಳೆ, ತನ್ನ ಮೇಲೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಬನ್ಗಾರಮವು ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನೆಗರ್ ಮತ್ತು ಆತನ ತಮ್ಮ ಅತುಲ್ ಸಿಂಗ್ ಸೆನೆಗರ್ ಅವರ ಸಂಗಡಿಗರ ಜೊತೆಗೂಡಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಮತ್ತು ನನಗೆ ನ್ಯಾಯ ಸಿಗದ ಕಾರಣ ಈ ರೀತಿ ಆತ್ಮಹತ್ಯೆ ಮಾಡಿಕೊಂಡು ನನ್ನ ಜೀವನ ಕೊನೆಗೊಳಿಸಲು ನಿರ್ಧಾರ ಮಾಡಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ.
ಹೊರಬಿತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ: ಆ ವರೆಗೂ ಹೆಚ್ಚಿನ ಮಾಧ್ಯಮ ಪ್ರಚಾರ ಪಡೆಯದ ಈ ಪ್ರಕರಣ ಒಮ್ಮಿಂದೊಮ್ಮೆಲೇ ರಾಜ್ಯಾದ್ಯಂತ ಸುದ್ದಿಯಾಯಿತು, ಇದರಿಂದಾಗಿ ಈ ಬಿಜೆಪಿ ಶಾಸಕನ ದೌರ್ಜನ್ಯ, ಗೂಂಡಾಗಿರಿಯ ಕರಾಳ ಮುಖದ ದರ್ಶನವಾಗಿದೆ. ಈ ಹಿಂದೆ ಬಹುಜನ ಸಮಾಜವಾದಿ ಪಕ್ಷದಲ್ಲಿದ್ದು ಅಲ್ಲಿಂದ ಸಮಾಜವಾದಿ ಪಕ್ಷಕ್ಕೆ ಹಾರಿ ಹಲವಾರು ಹಗರಣಗಳಲ್ಲಿ ಸಿಲುಕಿ ನಂತರ ಪಾಪ ನಾಶವಾಗಲು ಬಿಜೆಪಿ ಪಕ್ಷದ ಗಂಗೆಯಲ್ಲಿ ಮುಳುಗಿ ಎದ್ದು ಸಂಪೂರ್ಣ ಪರಿಶುದ್ಧವಾಗಿ ಉನ್ನಾವೊ ಜಿಲ್ಲೆಯ ಬನ್ಗಾರಮವು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗುತ್ತಾನೆ, ಆತನ ಮೇಲೆ ಜೂನ್ 4, 2017 ರಂದು 18ರ ಹರೆಯದ ಯುವತಿ ಸಾಮೂಹಿಕ ಅತ್ಯಾಚಾರದ ಆರೋಪ ಮಾಡುತ್ತಾಳೆ, ಶಾಸಕ, ಆತನ ತಮ್ಮ ಮತ್ತು ಸಂಗಡಿಗರು ನನ್ನ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ, ಅಲ್ಲಿಂದ ತಪ್ಪಿಸಿಕೊಂಡು ಠಾಣೆಗೆ ತೆರಳಿ ಧೈರ್ಯದಿಂದ ಪ್ರಕರಣ ದಾಖಲಿಸುತ್ತಾಳೆ, ಶಾಸಕ ಮತ್ತು ಆತನ ತಮ್ಮನ ಹೆಸರನ್ನೂ ಆರೋಪಿಗಳ ಹೆಸರಲ್ಲಿ ಮೊದಲನೆಯದಾಗಿ ಸೇರಿಸುತ್ತಾಳೆ.
ಆದರೆ ಆಗುವುದೇ ಬೇರೆ!: ಶಾಸಕನ ಹೆಸರಲ್ಲಿ ಎಫ್ಐಆರ್ ದಾಖಲು ಮಾಡಿದರೂ ಈ ಶಾಸಕನ ಪ್ರಭಾವ ಎಷ್ಟರವರಗಿರುತ್ತೆ ಅಂದ್ರೆ ಆತ ಸಂಪೂರ್ಣ ಎಫ್ಐಆರ್ ಬದಲಿಸಿಬಿಡಲು ಪೊಲೀಸರಿಗೆ ಸೂಚಿಸುತ್ತಾನೆ. ಆತನ ಚೇಳಾಗಳಾಗಿರುವ ಪೊಲೀಸರು ಆಶ್ಚರ್ಯಕರ ರೀತಿಯಲ್ಲಿ ಶಾಸಕನ ರಾಜಕೀಯ ಶತ್ರುಗಳೆಂದೇ ಪರಿಗಣಿಸಲ್ಪಟ್ಟ, ಈ ಪ್ರಕರಣಕ್ಕೆ ಸಂಬಂಧವೇ ಇಲ್ಲದಂತಹ ಮೂವರನ್ನು ಆರೋಪಿಗಳು ಎಂದು ಹೆಸರಿಸಿ ಎಫ್ಐಆರ್ ತಯಾರಿಸುತ್ತೆ.
ಭಾರತೀಯರನ್ನು ಭಾರತೀಯರೆಂದೇ ನೋಡಬೇಕು, ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಂವಿಧಾನದ ಅಡಿಯಲ್ಲಿ ಸಮಾನವಾದ ಹಕ್ಕುಗಳಿವೆ, ಆದರೂ ಹಿಂದುತ್ವದ ಹೆಸರೇಳಿಕೊಂಡು ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸುವ ಬಿಜೆಪಿ ಅದರಲ್ಲೂ ಹಿಂದುತ್ವವಾದಿ ನಾಯಕ, ತನ್ನ ಪ್ರಚೋದನಕಾರಿ ಕೋಮು ವಿಷ ಬಿತ್ತುವ ಭಾಷಣಕ್ಕೆ ಹೆಸರುವಾಸಿಯಾದ ‘ಫೈರ್ ಬ್ರ್ಯಾಂಡ್’ ಹಿಂದೂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದಲ್ಲಿ ರಾಣಿ ಪದ್ಮಾವತಿ ಬಗ್ಗೆ ಇಲ್ಲದ ವಿವಾದವನ್ನು ಸೃಷ್ಟಿಸಿ ಪದ್ಮಾವತಿ ಅಪಮಾನ ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಚಿತ್ರಕ್ಕೆ ಬ್ಯಾನ್ ಹಾಕುತ್ತಾರೆ ಆದರೆ ಅದೇ 18ರ ಹರೆಯದ ‘ಹಿಂದೂ’ ಸಹೋದರಿಯನ್ನು ತಮ್ಮದೇ ಪಕ್ಷದ ಶಾಸಕ ಮತ್ತು ಆತನ ತಮ್ಮ ನಿರಂತರ ಅತ್ಯಾಚಾರ ಮಾಡಿದ ಆರೋಪ ಹೊಂದಿದರೂ ಯಾವ ಬಿಜೆಪಿ ನಾಯಕನೂ, ಯಾವ ಹಿಂದೂ ಸಂಘಟನೆಯ ನಾಯಕನೂ ಈಕೆಯ ಸಹಾಯಕ್ಕೆ ಬರುವುದೇ ಇಲ್ಲ.
ಕಳೆದ ಒಂಬತ್ತು ತಿಂಗಳಿಂದ ಈ ಯುವತಿ ನ್ಯಾಯಕ್ಕಾಗಿ ಎಲ್ಲಾ ವರಿಷ್ಠ ಅಧಿಕಾರಿಗಳ ಕದ ತಟ್ಟಿದರೂ, ಯೋಗಿ ಆದಿತ್ಯನಾಥ್ ನಡೆಸುವ ಕಾರ್ಯಕ್ರಮದಲ್ಲೂ ಹೋಗಿ ಮನವಿ ಸಲ್ಲಿಸಿದರೂ ಕೇವಲ ಆಶ್ವಾಸನೆ ದೊರೆಯಿತೇ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ರೌಡಿ ಶೀಟರ್ ಆಗಿರುವ ಶಾಸಕ ಮತ್ತು ಆತನ ತಮ್ಮ ರೌಡಿ ಶೀಟರ್ ಅತುಲ್ ಸಿಂಗ್ ಪ್ರಭಾವ ಎಷ್ಟಿದೆ ಅಂದ್ರೆ ಆ ಕ್ಷೇತ್ರದಲ್ಲಿ ಏನೇ ಟೆಂಡರ್ ಪಾಸ್ ಆಗಬೇಕಿದ್ದರೂ ಇವರ ಅಪ್ಪಣೆ ಮತ್ತು ಇವರಿಗೆ ಕಮಿಷನ್ ನೀಡಿದ ನಂತರವೇ ಹಸಿರು ನಿಶಾನೆ ಸಿಗುವುದು, ಹಾಗಾಗಿ ಅತ್ಯಾಚಾರ ಸಂತ್ರಸ್ತೆ ನಡೆಸಿದ ಪ್ರತೀ ಪ್ರಯತ್ನಕ್ಕೂ ಮುನ್ನವೇ ಅದನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತಿತ್ತು.
ಏಪ್ರಿಲ್ 4ರಂದು ನಡೆಯಿತು ಮತ್ತೊಂದು ಗೂಂಡಾಗಿರಿ: ಏಪ್ರಿಲ್ ನಾಲ್ಕುರಂದು ಶಾಸಕ ಕುಲ್ದೀಪ್ ಸಿಂಗ್ ಸೆನೆಗರ್ ಅವರ ಸಹೋದರ ಅತುಲ್ ಸಿಂಗ್ ಸೆನೆಗರ್ ತನ್ನ ಬೆಂಬಲಿಗರೊಂದಿಗೆ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಅಡ್ಡಗಟ್ಟಿ ಮಗಳು ಕೊಟ್ಟಿರುವ ರೇಪ್ ಪ್ರಕರಣವನ್ನು ಹಿಂಪಡೆಯಬೇಕು ಎಂದು ಧಮ್ಕಿ ಹಾಕುತ್ತಾರೆ. ಅದಕ್ಕೆ ಒಪ್ಪದಿದ್ದಾಗ ಆತನಿಗೆ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ನಡೆಸುತ್ತಾರೆ. ಸಾರ್ವಜನಿಕರೆಲ್ಲರ ಮುಂದೆ ಹಾಡು ಹಗಲೇ ಹುಡುಗಿಯ ತಂದೆಯ ಮೇಲೆ ಹಲ್ಲೆ ನಡೆಸಿಯೂ ಯಾರೊಬ್ಬರ ಮೇಲೂ ದೂರು ದಾಖಲಾಗಲ್ಲ, ಮರುದಿನ ಏಪ್ರಿಲ್ 5ರಂದು ಅತ್ಯಾಚಾರ ಸಂತ್ರಸ್ತೆ ಹುಡುಗಿಯ ತಂದೆಯ ಮೇಲೆಯೇ ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಎರಡೆರಡು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತಾರೆ. ಆ ಸಂದರ್ಭದಲ್ಲಿ ಹುಡುಗಿಯ ತಾಯಿ ಶಾಸಕನ ತಮ್ಮ ಅತುಲ್ ಮತ್ತು ಸಹಚರರ ಮೇಲೆ ದೂರು ನೀಡಿದರೂ ಅತುಲ್ ನನ್ನು ಹಿಡಿಯುವ ಗೋಜಿಗೆ ಪೊಲೀಸರು ಹೋಗುವುದಿಲ್ಲ.
ಅತ್ತ ಕಡೆ ಸಾಮೂಹಿಕ ಅತ್ಯಾಚಾರ ಇತ್ತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ನಕಲಿ ಕೇಸು ದಾಖಲಿಸಿ ಬಂಧನ ನಡೆದಾಗ ಬೇರೆ ವಿಧಿಯಿಲ್ಲದೆ ಸಂತ್ರಸ್ತೆ ಹುಡುಗಿ ಏಪ್ರಿಲ್ 8ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆಯ ಮುಂದೆ ತಾಯಿಯೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ನಾಲ್ಕು ಜನ ಹದಿಹರೆಯದ ಸಹೋದರಿಯರು, ತಾಯಿ ಮತ್ತು ಅಜ್ಜಿ ಇವರೆಲ್ಲರಿಗೂ ಆಧಾರವಾಗಿದ್ದ ತಂದೆ ಜೈಲುಪಾಲಾಗಿದ್ದಾಗ ಇವರೆಲ್ಲರೂ ಅಕ್ಷರಶಃ ಬೀದಿಪಾಲಾಗುತ್ತಾರೆ.
ಏಪ್ರಿಲ್ 9ರಂದು ಸಂತ್ರಸ್ತೆಯ ತಂದೆಯ ಲಾಕಪ್ ಡೆತ್!: ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ದೂರು ದಾಖಲಿಸಿ ಕುತಂತ್ರದಿಂದ ಶಾಸಕರ ಪ್ರಭಾವಕ್ಕೆ ಒಳಗಾಗಿ ಬಂಧಿಸಿದ ಪೊಲೀಸರಿಗೆ ಅತ್ಯಾಚಾರ ಸಂತ್ರಸ್ತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆ ಮುಂದೆ ಆತ್ಮಹತ್ಯೆ ಯತ್ನ ಮಾಡಿದ ಘಟನೆ ಕೇಳಿ ಸಿಟ್ಟು ಜಾಸ್ತಿಯಾಗಿ ಮತ್ತೊಮ್ಮೆ ರೇಪ್ ಪ್ರಕರಣ ವಾಪಸ್ ಪಡೆಯಲು ಚಿತ್ರಹಿಂಸೆ ನೀಡಲು ಶುರು ಮಾಡ್ತಾರೆ, ಅವರ ಚಿತ್ರಹಿಂಸೆ ತಾಳಲಾರದೇ ಏಪ್ರಿಲ್ 9ರಂದು ಸಂತ್ರಸ್ತೆಯ ತಂದೆ ಸಾವನ್ನಪ್ಪುತ್ತಾರೆ.
ಸಂತ್ರಸ್ತೆಯ ತಂದೆ ಸಾವನ್ನಪ್ಪಿದ ಕೂಡಲೇ ಅವರಿಗೆ ಹುಷಾರಿಲ್ಲದ ಕಾರಣ, ಹೊಟ್ಟೆನೋವಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ವೈದ್ಯರಿಂದ ಹೇಳಿಕೆಯನ್ನೂ ಕೊಡಿಸುವಲ್ಲಿ ಗೂಂಡಾ ಶಾಸಕ ಯಶಸ್ವಿಯಾಗುತ್ತಾನೆ, ಪೊಲೀಸರೂ ಆತ ಹೊಟ್ಟೆನೋವಿನಿಂದ ಸತ್ತದ್ದು ಎಂದೇ ಮಾಧ್ಯಮದವರಿಗೂ ಹೇಳಿಕೆ ನೀಡುತ್ತಾರೆ ಯಾವುದೇ ಪೋಸ್ಟ್ ಮಾರ್ಟಮ್ ಮಾಡದೇ ಸಂತ್ರಸ್ತೆಯ ತಂದೆಯ ಶವವನ್ನು ಶವಾಗಾರದಿಂದ ಸ್ಮಶಾನಕ್ಕೆ ಸಾಗಿಸಲೂ ತಯಾರಾಗುತ್ತಾರೆ. ಆದರೆ ಮತ್ತೆ ಹೋರಾಟಕ್ಕಿಳಿದ ಸಂತ್ರಸ್ತೆ ಮತ್ತು ಮೃತನ ತಾಯಿ ನಮಗೆ ಬೇರೆ ಜಿಲ್ಲೆಯ ವೈದ್ಯರಿಂದ ಪೋಸ್ಟ್ ಮಾರ್ಟಮ್ ಮಾಡಿಸಿ ರಿಪೋರ್ಟ್ ತೆಗಿಸಬೇಕೆಂದು ಪಟ್ಟು ಹಿಡಿದ ಕಾರಣ ಅಂದೇ ಲಕ್ನೋ ದಿಂದ ಬೇರೆಯೇ ವೈದ್ಯರ ತಂಡ ಬಂದು ಪೋಸ್ಟ್ ಮಾರ್ಟಮ್ ನಡೆಸಿದೆ.
ಏಪ್ರಿಲ್ 10ರಂದು ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್! ಲಕ್ನೋದ ವೈದ್ಯರು ನಡೆಸಿದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಸಂತ್ರಸ್ತೆಯ ತಂದೆಯ ಸಾವು ಮಾರಣಾಂತಿಕ ಹಲ್ಲೆಯ ಕಾರಣ ದೇಹದ 14 ಜಾಗದಲ್ಲಿ ಉಂಟಾದ ಆಂತರಿಕ ಹಾನಿಯಿಂದ ಆಗಿದೆ ಎಂದು ತಿಳಿದು ಬಂದಿದ್ದು. ಇದೀಗ 6 ಜನ ಪೊಲೀಸರನ್ನು ಈ ಸಂಬಂಧ ಅಮಾನತು ಮಾಡಲಾಗಿದೆ ಹಾಗೂ ಇಂದು ಮಧ್ಯಾಹ್ನ ಶಾಸಕನ ತಮ್ಮನ ಬಂಧನವಾಗಿದೆ.
ಶಾಸಕನ ಗೂಂಡಾರಾಜ್ ಮುಂದೆ ಟುಸ್ಸಾದ ಯೋಗಿ ಆದಿತ್ಯನಾಥ್!: ಉನ್ನಾವೊ ಜಿಲ್ಲೆಯ ಬನ್ಗಾರಮವು ಕ್ಷೇತ್ರದ ಬಿಜೆಪಿ ಶಾಸಕನ ಪ್ರಭಾವ ಎಷ್ಟರವರಗಿರುತ್ತೆ ಅಂದ್ರೆ ಆತನ ಮೇಲೆ ಕ್ರಮ ಕೈಗೊಳ್ಳಲು ಯೋಗಿ ಆದಿತ್ಯನಾಥ್ ಗೂ ಸಾಧ್ಯವಾಗಿಲ್ಲ, ಆ ಶಾಸಕ ಈಗಲೂ ರಾಜಾರೋಷವಾಗಿ ಸಾರ್ವಜನಿಕವಾಗಿ ತಿರುಗಾಡುತ್ತಿದ್ದಾನೆ, ಅಲ್ಲದೇ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ನೀಚ ಜಾತಿಯ ಮಹಿಳೆ ಮಾಡಿದ ಸುಳ್ಳು ಆಪಾದನೆ’ ಎಂದು ಅವಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಾನೆ. ಕಾಟಾಚಾರಕ್ಕೆ ಬಂಧನವಾದ ಶಾಸಕನ ತಮ್ಮ ಅತುಲ್ ನಾಳೆ ಇದೇ ಶಾಸಕನ ಪ್ರಭಾವದಿಂದ ಹೊರಬರಬಹುದು.
ಯೋಗಿ ಆದಿತ್ಯನಾಥ್ ಮಾತ್ರ ಕೇಳಿದ ಪ್ರಶ್ನೆಗೆ ‘ನಾವು ಯಾವುದೇ ಕಾರಣಕ್ಕೂ ಯಾರನ್ನೂ ಶಿಕ್ಷಿಸದೇ ಬಿಡಲ್ಲ’ ಎನ್ನುವ ಒಂದೇ ಡೈಲಾಗ್ ಹೇಳುತ್ತಿದ್ದಾರೆ. ಅಷ್ಟು ದೊಡ್ಡ ಉತ್ತರ ಪ್ರದೇಶ ರಾಜ್ಯದ ಯಾವುದೇ ಹಿಂದೂ ಸಂಘಟನೆಗಳು, ಮಹಿಳಾ ಸಂಘಟನೆಗಳು ಈ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಮೂವರು ಸಹೋದರಿಯರು, ತಾಯಿ ಮತ್ತು ಅಜ್ಜಿಯ ಸಹಾಯಕ್ಕೆ ನಿಂತಿಲ್ಲ. ಅಮಾಯಕ ಹೆಣ್ಣಿನ ಅರಣ್ಯ ರೋಧನದ ಕಡೆಗೆ ಗಮನ ಹರಿಸಲು ಅವರ್ಯಾರಿಗೂ ಸಮಯವಿಲ್ಲ.. ಇದೀಗ ಯುವತಿಯ ರೇಪ್ ಮತ್ತು ಆಕೆಯ ತಂದೆಯ ಹತ್ಯೆ ತನಿಖೆಗೆ ವಿಶೇಷ ತನಿಖಾ ದಳ ನೇಮಕವಾಗಿದ್ದು ಅವರು ಯಾವ ರೀತಿ ತನಿಖೆ ನಡೆಸುತ್ತಾರೆ ಕಾದು ನೋಡಬೇಕು.