ತಮಿಳುನಾಡು ಬಂದ್: ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲೆಸೆದು ಚಾಲಕ, ನಿರ್ವಾಹಕನಿಗೆ ಥಳಿತ!
ನ್ಯೂಸ್ ಕನ್ನಡ ವರದಿ-(11.04.18): ಕಾವೇರಿಯ ಕುರಿತಾದಂತೆ ಸುಪ್ರೀಮ್ ಕೋರ್ಟ್ ತೀರ್ಪು ನೀಡಿದ್ದರೂ, ವಿವಾದವು ಇನ್ನೂ ಬಗೆಹರಿಯುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ತಮಿಳುನಾಡಿನಾದ್ಯಂತ ಕಾವೇರಿ ಜಲನಿರ್ವಹಣಾ ಮಂಡಳಿಯನ್ನು ರಚಿಸಬೇಕೆಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ತಮಿಳುನಾಡಿನ ಸೆಲೆಬ್ರಟಿಗಳು ಕೂಡಾ ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ. ನಿನ್ನೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯಕ್ಕೂ ಪ್ರತಿಭಟನೆಯ ಬಿಸಿ ತಾಗಿತ್ತು. ಇದೀಗ ಪ್ರತಿಭಟನೆಯು ಹಿಂಸಾರೂಪವನ್ನು ತಾಳಿದ್ದು, ಕೆಎಸ್ಸಾರ್ಟಿಸಿ ಬಸ್ ಗಳಿಗೆ ಕಲ್ಲೆಸೆಯಲಾಗಿದೆ ಹಾಗೂ ಚಾಲಕ ಮತ್ತು ನಿರ್ವಾಹಕನಿಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕಡಲೂರಿನ ವಿಳ್ಳುಪುರದಲ್ಲಿ ಮಂಗಳವಾರ ಸಂಜೆ ಕೆಎಸ್ಆರ್ಟಿಸಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಚಾಲಕ ಮತ್ತು ನಿರ್ವಾಹಕನ ಮೇಲೂ ಹಲ್ಲೆ ನಡೆಸಿ ತಮಿಳುನಾಡಿನ ಪರ ಘೋಷಣೆಗಳನ್ನು ಕೂಗಿಸಲಾಗಿದೆ. ಬಸ್ ಅಡ್ಡಗಟ್ಟಿದ 40 ಕ್ಕೂ ಹೆಚ್ಚು ಕಿಡಿ ಗೇಡಿಗಳು ದಾಂಧಲೆ ನಡೆಸಿದ್ದು , ಚಾಲಕ ಬಸವಾರಜ್ ಮತ್ತುನಿರ್ವಾಹಕ ಗುರು ಸಂಗಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು ಚಾಲಕ ಮತ್ತು ನಿರ್ವಾಹಕನಿಗೆ ರಕ್ಷಣೆ ನೀಡಿದ್ದಾರೆ. ಬಂದ್ ಹಿನ್ನಲೆಯಲ್ಲಿ ಕರ್ನಾಟಕದಿಂದ ಯಾವುದೇ ಸರ್ಕಾರಿ ಬಸ್ಗಳು ತಮಿಳುನಾಡಿನತ್ತ ಸಂಚರಿಸುತ್ತಿಲ್ಲ.