ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಸಚಿವ ಅಮಿತ್​ ಶಾಗೆ ಸಮನ್ಸ್​ ಜಾರಿ ಮಾಡಿದ ಪಶ್ಚಿಮ ಬಂಗಾಳದ ನ್ಯಾಯಾಲಯ

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ (Amit Sha), ಖುದ್ದು ಅಥವಾ ಪ್ರತಿನಿಧಿಯ ಮೂಲಕ ಕೋರ್ಟ್​ಗೆ ಹಾಜರಾಗಬೇಕು ಎಂದು ಪಶ್ಚಿಮ ಬಂಗಾಳದ ಲೋಕಸಭಾ ಸದಸ್ಯರ ಹಾಗೂ ಶಾಸಕರ ವಿಶೇಷ ನ್ಯಾಯಾಲಯ (West Bengal Court Summons) ಸಮನ್ಸ್ ನೀಡಿದೆ.

ಫೆಬ್ರವರಿ 22ರಂದು ಅಮಿತ್ ಶಾ ಕೋರ್ಟ್ ಮುಂದೆ ಬರಬೇಕು ಎಂದು ನ್ಯಾಯಾಲಯ ತಿಳಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ (TMC) ನಾಯಕ, ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಈ ಕ್ರಮ ಕೈಗೊಂಡಿದೆ.

ಆಗಸ್ಟ್ 28, 2018ರಂದು ಅಮಿತ್ ಶಾ ವಿರುದ್ಧ ಅಭಿಷೇಕ್ ಬ್ಯಾನರ್ಜಿ, ಸೆಕ್ಷನ್ 500ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಅದರಂತೆ ಅಮಿತ್ ಶಾ ಖುದ್ದಾಗಿ ಅಥವಾ ಅವರ ಪರವಾಗಿ ಪ್ರತಿನಿಧಿಯೊಬ್ಬರು ಫೆಬ್ರವರಿ 22, ಬೆಳಗ್ಗೆ 10 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಿರಬೇಕು ಎಂದು ತಿಳಿಸಲಾಗಿದೆ.

ಅಮಿತ್ ಶಾ ಮೇಲಿರುವ ಆರೋಪವೇನು?
ಆಗಸ್ಟ್ 11, 2018ರಂದು ಬಿಜೆಪಿ ಆಯೋಜಿಸಿದ್ದ ‘ಯುವ ಸ್ವಾಭಿಮಾನ್ ಸಮಾವೇಶ’ ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದರು. ಕೋಲ್ಕತ್ತಾದ ಮಾಯೋ ರಸ್ತೆಯಲ್ಲಿ ಮಾತನಾಡಿದ್ದ ಶಾ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದಾಗಿ ಕೇಂದ್ರದ ನಿಧಿಯಿಂದ ವಿತರಿಸಲಾದ ಹಣವು ಪಶ್ಚಿಮ ಬಂಗಾಳದ ಜನರನ್ನು ತಲುಪಿಲ್ಲ ಎಂದು ಟಿಎಂಸಿ ವಿರುದ್ಧ ಆರೋಪ ಹೊರಿಸಿದ್ದರು.

‘ಬಂಗಾಳದ ಜನರೇ, ಪ್ರಧಾನಿ ನರೇಂದ್ರ ಮೋದಿ ಕಳಿಸಿರುವ ಹಣ ನಿಮ್ಮನ್ನು ತಲುಪಿದೆಯೇ? 3,59,000 ಕೋಟಿ ಎಲ್ಲಿಗೆ ಹೋಯಿತು? ಈ ಹಣದಿಂದ ತೃಣಮೂಲ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ’ ಎಂದು ಶಾ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಟಿಎಂಸಿ ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಆಗಸ್ಟ್ 13ರಂದು ಅಮಿತ್ ಶಾಗೆ ಕಾನೂನು ನೋಟೀಸ್ ಕಳಿಸಿದ್ದರು. ಮಾನಹಾನಿ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದರು. ಬಳಿಕ, ಅಭಿಷೇಕ್ ಬ್ಯಾನರ್ಜಿ ಅಮಿತ್ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಜಿದ್ದಾಜಿದ್ದಿ ಏರ್ಪಟ್ಟಿರುವುದು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಮಿತ್ ಶಾ ಸಹಿತ ಇತರ ಬಿಜೆಪಿ ನಾಯಕರು ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ (ಫೆ. 18, 19) ಎರಡು ದಿನಗಳ ಕಾಲ ಶಾ ಬಂಗಾಳ ಪ್ರವಾಸದಲ್ಲಿದ್ದರು. ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಈ ಎಲ್ಲಾ ಘಟನೆಗಳ ಬೆನ್ನಲ್ಲಿ ಅಮಿತ್ ಶಾಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿರುವುದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *