ವಿಮಾನದಲ್ಲಿ ಸೊಳ್ಳೆ ಕಚ್ಚುತ್ತಿದೆ ಎಂದು ಹೇಳಿದ್ದಕ್ಕೆ ರನ್ ವೇ ನಲ್ಲೇ ಪ್ರಯಾಣಿಕನನ್ನು ಕೆಳಕ್ಕಿಳಿಸಿದ ಇಂಡಿಗೋ ಏರ್ ಲೈನ್ಸ್!
ನ್ಯೂಸ್ ಕನ್ನಡ ವರದಿ(11-04-2018): ಲಕ್ನೋದಿಮದ ಬೆಂಗಳೂರಿಗೆ ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ನನಗೆ ಸೊಳ್ಳೆ ಕಚ್ಚುತ್ತಿದೆ ಎಂದು ಹೇಳಿದ ಕಾರಣ ಆತನನ್ನು ರನ್ ವೇ ಯಲ್ಲೇ ಕೆಳಕ್ಕಿಳಿಸಿದ ಘಟನೆ ಲಕ್ನೋದಿಂದ ವರದಿಯಾಗಿದೆ.
ಸೌರಭ್ ರಾಯ್ ಎಂಬ ಪ್ರಯಾಣಿಕ ಲಕ್ನೋ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸಲೋಸ್ಕರ ಇಂಡಿಗೋ ವಿಮಾನವನ್ನು ಹತ್ತಿದನು. ತಕ್ಷಣ ಆತನಿಗೆ ಸೊಳ್ಳೆ ಕಚ್ಚಿದ ಕಾರಣ ವಿಮಾನದ ಸಿಬ್ಬಂದಿಗಳಲ್ಲಿ ವಿಮಾನದಲ್ಲಿ ಸೊಳ್ಳೆ ಇದೆ ಎಂದು ಹೇಳಿದನು. ಈ ವೇಳೆ ವಿಮಾನದ ಸಿಬ್ಬಂದಿಗಳು ಆತನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಮಾತ್ರವಲ್ಲ ಆತನನ್ನು ರನ್ ವೇನಲ್ಲೇ ಕೆಳಕ್ಕಿಳಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಇಂಡಿಗೋ ಏರ್ ಲೈನ್ಸ್ ಅಧಿಕಾರಿಗಳು ಹೇಳುವ ಪ್ರಕಾರ ಸೌರಭ್ ರಾಯ್ ಎಂಬ ಪ್ರಯಾಣಿಕ ತೋರಿದ ದುರ್ವರ್ತನೆಯ ಕಾರಣ ಆತನನ್ನು ವಿಮಾನದಿಂದ ಕೆಳಕ್ಕಿಳಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪೈಲಟ್ ಇನ್ ಕಮಾಂಡ್ ಈ ಕ್ರಮವನ್ನು ಕೈಗೊಂಡರು ಎಂದಿದೆ.