ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಜಗ್ಗೇಶ್’ಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ನಟ ದರ್ಶನ್ ಅಭಿಮಾನಿಗಳು!

‘ನವರಸನಾಯಕ’ ನಟ ಜಗ್ಗೇಶ್‌ ಅವರು ಆಡುವ ಮಾತುಗಳು ಆಗಾಗ ಕಿರಿಕ್‌ ಉಂಟು ಮಾಡಿರುವ ಉದಾಹರಣೆಗಳು ಇವೆ. ಈಗಾಗಲೇ ಸಾಕಷ್ಟು ಬಾರಿ ಅವರು ವಿವಾದಗಳಿಗೆ ಗುರಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ದರ್ಶನ್ ಅಭಿಮಾನಿಗಳ ಕುರಿತು ಜಗ್ಗೇಶ್ ಮಾತನಾಡಿರುವ ಆಡಿಯೋ ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಈಗ ಇದೇ ವಿಚಾರವಾಗಿ ಕ್ಷಮೆ ಕೇಳಿ ಎಂದು ಜಗ್ಗೇಶ್‌ರನ್ನು ದರ್ಶನ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರ ಜೊತೆ ಜಗ್ಗೇಶ್‌ ಅವರು ಫೋನ್‌ನಲ್ಲಿ ಮಾತನಾಡಿದ ಸಂಭಾಷಣೆಯ ಆಡಿಯೋ ಕ್ಲಿಪ್‌ ಲೀಕ್‌ ಆಗಿ, ರಾದ್ಧಾಂತ ಸೃಷ್ಟಿ ಮಾಡಿತ್ತು. ನಟ ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದರು. ಈಗ ದರ್ಶನ್ ಅಭಿಮಾನಿಗಳು, ಜಗ್ಗೇಶ್ ಅವರಿಗೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.

ಜಗ್ಗೇಶ್ ಅವರು ಸಿನಿಮಾವೊಂದರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಮುತ್ತಿಗೆ ಹಾಕಿಕೊಂಡ ಒಂದಷ್ಟು ಜನರು ಕ್ಷಮೆ ಕೇಳಲೇಬೇಕು ಎಂದು ಹಠ ಹಿಡಿದಿದ್ದಾರೆ. ಆಗ ಮಾತನಾಡಿದ ಜಗ್ಗೇಶ್ “ನನಗೂ ಇದಕ್ಕೂ ಸಂಬಂಧವೇ ಇಲ್ಲ. ಅದು ನನ್ನ ಧ್ವನಿ ಅಲ್ಲ. ನಾನು ಕ್ಷಮೆ ಕೇಳಲ್ಲ. ತಂದಿಡುವ ಸಲುವಾಗಿ ಈ ರೀತಿ ಮಾಡಲಾಗಿದೆ. ತಪ್ಪು ಸಂದೇಶ ಹೋಗಿದೆ. ಇದು ದೊಡ್ಡ ಬಹಳ ಹುನ್ನಾರ. ದರ್ಶನ್‌ ಅವರಿಗೆ ಮುಂಚಿನಿಂದಲೂ ನಾನು ಬೆಂಬಲ ನೀಡಿದ್ದೇನೆ. ನನ್ನ ಮತ್ತು ದರ್ಶನ್ ಬಾಂಧವ್ಯ ಹಾಳು ಮಾಡಲಾಗೋದಿಲ್ಲ. ನಾನು ಹಾಗೂ ದರ್ಶನ್ ಚೆನ್ನಾಗಿದ್ದೇವೆ” ಎಂದು ಜಗ್ಗೇಶ್ ಹೇಳಿದ್ದಾರೆ.

ಜಗ್ಗೇಶ್‌ ನಿರ್ಮಾಪಕರೊಬ್ಬರ ಬಳಿ ಸಿನಿಮಾ ಜಾಹೀರಾತಿನ ಬಗ್ಗೆ ದೂರವಾಣಿ ಮೂಲಕ ಮಾತನಾಡುವಾಗ, ಕನ್ನಡದ ದಿನಪತ್ರಿಕೆ, ಸೋಶಿಯಲ್‌ ಮೀಡಿಯಾದಲ್ಲಿ ಸಿನಿಮಾ ಪ್ರಚಾರ ಮಾಡುವವರ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ಆಗ ಅವರು “ಆ ಹುಡುಗನಿಗೆ ಏನಾದರೂ ಕೊಡು. ಅವನು ಮದುವೆ ಆಗಿದ್ದಾನೆ. ಪಾಪ, ಸಪರೇಟ್‌ ಸಂಸಾರ ಮಾಡ್ತಿದ್ದಾನೆ. ಕಷ್ಟದಲ್ಲಿದ್ದಾನೆ. ಒಳ್ಳೆಯ ಹಾರ್ಡ್‌ ವರ್ಕರ್‌. ನಮ್ಮ ಹತ್ರ ಇರುವವರೆಲ್ಲ ಇಂಥವರೇನೇ. ಆದರೆ, ದರ್ಶನ್‌ ಥರ, ಅವರ ಥರ ಇದಾರಲ್ಲಾ.. ಮಾಂಸ ಕಳಿಸಿ ಅಣ್ಣಾ… ನೂರು ಕುರಿ ಕಳಿಸಿ ಅಣ್ಣಾ ಅನ್ನುವಂಥವರು ಯಾರೂ ಇಲ್ಲ ನನ್ನ ಹತ್ತಿರ’ ಎಂದು ಹೇಳಿದ್ದಾರೆ. ಇದೇ ಈಗ ವಿವಾದ ಸೃಷ್ಟಿ ಮಾಡಿದೆ.

Leave a Reply

Your email address will not be published. Required fields are marked *