ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟ ಕೇಸ್​ಗೆ ಸಂಬಂಧಿಸಿ ದುರಂತದಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಹಿರೇನಾಗವೇಲಿಯ ಒಬ್ಬರು, ಬಾಗೇಪಲ್ಲಿಯ ಒಬ್ಬರು, ಆಂಧ್ರ ಮೂಲದ ಮೂವರು, ನೇಪಾಳದ ಒಬ್ಬರು ಮೃತಪಟ್ಟಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ಬಳಿಕ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಇನ್ನು ಈ ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಭ್ರಮರಾ ವಾಸಿನಿ ಸ್ಟೋನ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ಜೆಲ್ಲಿ ಕ್ರಷರ್ ಇದಾಗಿದೆ. ಇಲ್ಲಿ ಕಲ್ಲು ಕ್ವಾರಿಯನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತೆನ್ನಲಾಗಿದೆ. ಎಂಜಿನಿಯರ್ ಉಮಾಕಾಂತ್, ಸ್ಥಳೀಯ ನಿವಾಸಿ ರಾಮು, ವಾಚ್​ಮ್ಯಾನ್ ಮಹೇಶ್, ಗಂಗಾಧರ್, ಕಂಪ್ಯೂಟರ್ ಆಪರೇಟರ್ ಮುರಳಿ ಈ ಐವರು ಸ್ಥಳದಲ್ಲೇ ಸತ್ತವರು.

ಭ್ರಮರವರ್ಷಿಣಿ ಮಾಲೀಕರು ಸ್ಫೋಟಕ ಸಂಗ್ರಹಿಸಿದ್ದು ತಿಳಿದಿದೆ, ಭ್ರಮರವರ್ಷಿಣಿ ಕಲ್ಲು ಕ್ವಾರಿಗೆ ಮೂವರು ಮಾಲೀಕರಿದ್ದಾರೆ. ಇಬ್ಬರು ಆಂಧ್ರ ಮೂಲದವರು, ಒಬ್ಬರು ಗುಡಿಬಂಡೆಯವರು. ಆದಷ್ಟು ಶೀಘ್ರದಲ್ಲಿ ಅವರನ್ನು ಹಿಡಿಯುವ ಕೆಲಸ ಆಗುತ್ತದೆ. ಕಲ್ಲು ಕ್ವಾರಿ ಮಾಲೀಕರ ಬಂಧನಕ್ಕೆ ಪೊಲೀಸ್ ತಂಡ ರಚನೆ ಮಾಡಲಾಗುತ್ತೆ. ಅವರಿಗೆ ಅಕ್ರಮವಾಗಿ ಸ್ಫೋಟಕ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತೆ. ನಿಯಮಬಾಹಿರ ಚಟುವಟಿಕೆಗಳಿಂದ ಇಂಥ ಘಟನೆ ನಡೆಯುತ್ತೆ. ಅಧಿಕಾರಿಗಳು ಈ ರೀತಿ ನಡೆಯದಂತೆ ಕಠಿಣ ಕ್ರಮಕೈಗೊಳ್ತಾರೆ. ಈ ಘಟನೆಗೆ ಮಾಲೀಕರೇ ಪ್ರಮುಖ ಆರೋಪಿಗಳಾಗುತ್ತಾರೆ. ಆದಷ್ಟು ಶೀಘ್ರದಲ್ಲಿ ಅವರನ್ನು ಹಿಡಿಯುವ ಕೆಲಸ ಆಗುತ್ತದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

ರಾಮು ಮನೆಗೆ ಸಚಿವ ಸುಧಾಕರ್ ಭೇಟಿ
ಘಟನೆಯಲ್ಲಿ ಮೃತಪಟ್ಟ ರಾಮು ಮನೆಗೆ ಸಚಿವ ಸುಧಾಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೂ ರಾಮು ಬಗ್ಗೆ ಪತ್ನಿಯಿಂದ ಮಾಹಿತಿ ಪಡೆದಿದ್ದಾರೆ. ಜಿಲೆಟಿನ್ ಸ್ಫೋಟದಲ್ಲಿ ಹಿರೇನಾಗವೇಲಿ ಗ್ರಾಮದ ರಾಮು ಮೃತಪಟ್ಟಿದ್ದಾರೆ. ಪಿಯುಸಿ ಓದಿದ್ದ ರಾಮು ಕ್ವಾರಿ ಬಳಿ ಅಂಗಡಿಯಿಟ್ಟುಕೊಂಡಿದ್ದ. ಕ್ವಾರಿ ಮಾಲೀಕರೇ ಬಂದು ಕ್ವಾರಿ ನೋಡಿಕೊಳ್ಳಲು ಹೇಳಿದ್ದರು. ನಿನ್ನೆ ಬೆಳಗ್ಗೆ 8 ಗಂಟೆಗೆ ಕ್ವಾರಿಯಲ್ಲಿ ಕೆಲಸಕ್ಕೆ‌ ಹೋಗಿದ್ದ. ಬಳಿಕ ಗುಡಿಬಂಡೆಗೆ ಸ್ನೇಹಿತನ ಮನೆ ಗೃಹ ಪ್ರವೇಶಕ್ಕೆ‌ ಹೋಗಿದ್ದ. ಆದ್ರೆ ರಾತ್ರಿ ನಡೆದ ಘಟನೆಯಲ್ಲಿ ರಾಮು ಮೃತಪಟ್ಟಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೃತ ರಾಮು ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ರಾತ್ರಿಯೇ ಘಟನೆ‌ ನಡೆದರೂ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸ್ಫೋಟ ಸ್ಥಳದಿಂದ ಕೂಗಳತೆ ದೂರದಲ್ಲಿ ರಾಮು ಕುಟುಂಬವಿದೆ. ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರಾಮು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಗ್ರಾಮಸ್ಥನ ತೀವ್ರ ಆಕ್ರೋಶ
ಇನ್ನು ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಹಿರೇನಾಗವೇಲಿ ಗ್ರಾಮಸ್ಥ ರಾಘವೇಂದ್ರ ಎಂಬುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಡಾ.ಸುಧಾಕರ್ ನೇರ ಕಾರಣ ಎಂದು ಸ್ಥಳ ಪರಿಶೀಲನೆಗೆ ಬಂದಿದ್ದ ಸಚಿವ ಸುಧಾಕರ್ ವಿರುದ್ಧ ರಾಘವೇಂದ್ರ ಗರಂ ಆಗಿದ್ದಾರೆ. ಸುಧಾಕರ್ ಎದುರು ಅವರ ಸಂಬಂಧಿಗಳ ವಿರುದ್ಧವೇ ಕಿಡಿಕಾರಿದ್ರು. ದಬ್ಬಾಳಿಕೆಯಿಂದ ಜಮೀನು ಖರೀದಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಇದೆಲ್ಲ ಹೇಳುತ್ತಿದ್ದಂತೆ ತಕ್ಷಣ ಪೊಲೀಸರು ಗ್ರಾಮಸ್ಥ ರಾಘವೇಂದ್ರನನ್ನ ಹೊರಹಾಕಿದ್ದಾರೆ.

ಘಟನೆ ನಡೆದ ಜಲ್ಲಿ ಕ್ರಶರ್ ಭ್ರಮರಾವಾಸಿನಿ ಸಂಸ್ಥೆಗೆ ಸೇರಿದ್ದು, ಅದು ರಾಘವೇಂದ್ರ ರೆಡ್ಡಿ, ನಾಗರಾಜರೆಡ್ಡಿ ಮತ್ತು ಶಿವಾ ರೆಡ್ಡಿ ಅವರು ಮಾಲೀಕರಾಗಿದ್ದಾರೆ. ಇಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನ ಶೇಖರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಫೆ. 7ರಂದು ಇಲ್ಲಿ ದಾಳಿ ಕೂಡ ಮಾಡಿದ್ದರು. ನಿನ್ನೆ ಸೋಮವಾರ ಸಂಜೆ ಕೂಡ ಪೊಲೀಸರು ರೇಡ್ ಮಾಡಿದ್ದರೂ ಜಿಲೆಟಿನ್ ಕಡ್ಡಿ ಸಿಕ್ಕಿರಲಿಲ್ಲ. ಆ ಸ್ಫೋಟಕವನ್ನ ಅರಣ್ಯ ಪ್ರದೇಶದಲ್ಲಿ ಇರಿಸಲಾಗಿತ್ತೆನ್ನಲಾಗಿದೆ. ಪೊಲೀಸರು ವಾಪಸ್ ಹೋದ ಬಳಿಕ ಅರಣ್ಯ ಪ್ರದೇಶದಿಂದ ಆ ಜಿಲೆಟಿನ್ ಕಡ್ಡಿಗಳನ್ನ ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯೆ ಪಾರ್ಟಿ ಮಾಡುವ ಸಂದರ್ಭದಲ್ಲಿ ಜಿಲೆಟಿನ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *