ದರ್ಶನ್ ಅಭಿಮಾನಿಗಳ ನಡವಳಿಕೆಗೆ ಗರಂ ಆಗಿ ಆಕ್ರೋಶ ವ್ಯಕ್ತಪಡಿಸಿದ ಜಗ್ಗೇಶ್; ತನ್ನ ಮುಂದಿನ ನಡೆಯನ್ನು ತಿಳಿಸಿದ ನಟ
ಬೆಂಗಳೂರು: ನಾನು ಅಪ್ಪನಿಗೆ ಹುಟ್ಟಿದವನು.. ಎಲ್ಲಿಗೂ ಓಡಿ ಹೋಗಲ್ಲ… ಹಿಂದೆ ಮುಂದೆ ಮುಚ್ಚಿಟ್ಟುಕೊಂಡು ನಾನು ಮಾತನಾಡುವುದಿಲ್ಲ.. ಇನ್ನು ಮುಂದೆ ಸಿನಿಮಾ ಕಾರ್ಯಕ್ರಮ ಇರುವುದಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ನಿನ್ನೆ ತೋತಾಪುರಿ ಸಿನಿಮಾ ಚಿತ್ರೀಕರಣದ ವೇಳೆ ಸ್ಥಳಕ್ಕಾಗಮಿಸಿದ್ದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ್ದರು. ಇದೇ ವಿಚಾರವಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರವಾಗಿ ಇಂದು ಲೈವ್ ನಲ್ಲಿ ಮಾತನಾಡಿದ ನಟ ಜಗ್ಗೇಶ್ ಅವರು, ‘ನಾನು ಅಪ್ಪನಿಗೆ ಹುಟ್ಟಿದವನು ಎಲ್ಲಿಗೂ ಹೋಗಲ್ಲ. ಹಿಂದೆ ಮುಂದೆ ಮುಚ್ಚಿಟ್ಟುಕೊಂಡು ಯಾಕೆ ಮಾತನಾಡಲಿ ನಾನೊಬ್ಬ ಆರ್ಎಸ್ಎಸ್ ಕಾರ್ಯಕರ್ತ.. ಒಂದು ವಿಷಯವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಸಣ್ಣ ವಿಷಯವನ್ನು ಇಟ್ಟುಕೊಂಡು ನೋವು, ಅಪಮಾನವನ್ನು ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ, ರಾಬರಿ ಮಾಡಿದ್ದೀನಾ? ಹೆದರಿ ಕೂತಿದೀನಾ? ನಿನ್ನೆ ಬಂದಿರುವವರ ಜೊತೆಯಲ್ಲಿ ಅವರೊಂದಿಗೆ ಕೂತು ಮಾತನಾಡಿದ್ದೇನೆ. ಕೋಟ್ಯಾಂತರ ರೂಪಾಯಿ ವಂಚನೆ, ಕನ್ನಡ ನೆಲಕ್ಕೆ ಅವಮಾನ ಮಾಡಿದ್ದೀನಾ. ಅಪಚಾರ, ಅವಮಾನ ನಾನು ಮಾಡಿಲ್ಲ, ಖಾಸಗಿ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವ ಹಾಗೆ ಆಗಿದೆ ಹಾಗಂತ ನಾನು ಹೆದರಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.
ಅಂತೆಯೇ , ‘ನಾನು ಸಿನಿಮಾ ರಂಗಕ್ಕೆ ಬಂದು 40 ವರ್ಷವಾಯಿತು. ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಯಾರು ಹುಟ್ಟಿರಲಿಲ್ಲ. 80ನೇ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು, ರಾಜ್ಕುಮಾರ್, ವಿಷ್ಣುವರ್ಧನ್, ಪ್ರಭಾಕರ್ ಅವರ ಜೊತೆಗೆ ಹೆಜ್ಜೆ ಹಾಕುತ್ತಾ ಬಂದಿರುವನು ನಾನು. ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಎಲ್ಲಾ ನನ್ನ ಕನ್ನಡಿಗರಿಂದಾಗಿದೆ. ಕನ್ನಡಕ್ಕಾಗಿಯೆ ಬದುಕುತ್ತಿದ್ದೇನೆ ಮುಂದೆಯು ಬದುಕುತ್ತೇನೆ. ಇಲ್ಲಯವರೆಗೂ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡಿಲ್ಲ.. ಅದು ನನಗೆ ಬೇಕಿಲ್ಲ ಕೂಡ… ನಾನು ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆ. ನಾನು ನನ್ನ ಬದುಕಲ್ಲೇ ಯಾರ ಬೂಟು ನೆಕ್ಕಿಲ್ಲ…. ಹಾಗೇ ಮಾಡಿದ್ದರೆ ನಾನು ಎಂಎಲ್ಎ, ಮಂತ್ರಿ ಆಗಿರುತ್ತಿದ್ದೆ. ನೂರಾರು ಪೋಸ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದೆ. ನೀವು ಹೇಳಿದ್ದನೆಲ್ಲ ನಂಬಲು ಜನ ಒಂದು ಸೈಡ್ ಇಲ್ಲ. ಇಂದು ತಂತ್ರಜ್ಞಾನ ಸಾಕಷ್ಟು ಬೆಳೆದಿದೆ… ಸತ್ಯ ಹೇಳುವುದಕ್ಕೆ ಸೋಷಿಯಲ್ ಮೀಡಿಯಾ ಇದೆ. ಇದೆನಾ ನೀವು ಹಿರಿಯ ನಟರಿಗೆ ಕೊಡುವ ಗೌರವ? ಅನ್ಯಭಾಷೆಯವರು ಬಂದು ಕರ್ನಾಟಕವನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೇರೆಯವರು ಬಂದು ಅವರ ಭಾಷೆಯಲ್ಲಿ ಮಾತನಾಡುವಂತೆ ಪ್ರಚೋದನೆ ಕೊಡುತ್ತಿದ್ದಾರೆ.. ಕನ್ನಡ ಚಿತ್ರರಂಗ ಹಾಳಾಗಿ ಹೋಗಬೇಕಾ..? ಯಾರು ಹೇಳುವವರು ಕೇಳುವವರು ಇಲ್ಲವಾ..?
ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಹೋದ ಮೇಲೆ ಕನ್ನಡ ಸ್ವಾಭಿಮಾನವು ಸಾಯುತ್ತಿದೆ. ಉಳಿದಿರುವುದು ನಾವು ಕೆಲವರು ಮಾತ್ರ.. ನಾವು ಸತ್ತ ಮೇಲೆ ನಮ್ಮ ತಿಥಿಯನ್ನು ಮಾಡಿ ಸಂತೋಷವನ್ನು ಪಡಿ. ನನಗೆ ಬಹಳ ನೋವು ಕೊಟ್ಟಿದ್ದೀರಾ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಇದಕ್ಕೂ ಮೊದಲು ಮತ್ತೊಂದು ಟ್ವೀಟ್ ಮಾಡಿದ್ದ ಜಗ್ಗೇಶ್, ‘ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದಿನ ದಿನಗಳಲ್ಲಿ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಟಿವಿ ಶೋಗಳಿಗೆ ಮಾತ್ರ ಬದುಕು ಮೀಸಲು ಇಡುತ್ತೇನೆ. ತುಂಬ ತಾಮಸವಾಗಿದೆ ನನಗೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ’ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.