ಸಂತೋಷ್ ಲಾಡ್ ಹಾಗೂ ಜನಾರ್ದನ ರೆಡ್ಡಿ ಗೌಪ್ಯ ಭೇಟಿ! ಕಾಂಗ್ರೆಸ್ ಸೇರಲಿದ್ದಾರೆಯೇ ಗಣಿಧನಿ?!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ರಾಜಕೀಯದಲ್ಲಿ ಯಾರು ಶಾಶ್ವತ ಮಿತ್ರರೂ ಅಲ್ಲ ಯಾರು ಶಾಶ್ವತ ಶತ್ರುಗಳೂ ಅಲ್ಲ ಎಂಬುವುದು ಬಹಳಷ್ಟು ಬಾರಿ ಸಾಬೀತಾಗಿದೆ. ಚುನಾವಣೆ ಹತ್ತಿರ ಬಂದಂತೆ ರಾಜಕೀಯ ನಾಯಕರ ಪಕ್ಷಾಂತರ ಪರ್ವವೂ ಶುರುವಾಗಿದೆ. ಈ ಬಾರಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಂದ ಸಾರಾಸಗಟವಾಗಿ ತಿರಸ್ಕರಿಸಲ್ಪಟ್ಟ ಗಣಿಧನಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿ ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇದೀಗ ಈ ವದಂತಿಗೆ ಪುಷ್ಟಿ ನೀಡುವಂತಹ ಒಂದು ಮಾತುಕತೆ ನಿನ್ನೆ ನಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಗೆ ಬೇಡವಾದ ಗಣಿಧಣಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಸೇರ್ತಾರಾ..? ಹೀಗೊಂದು ಪ್ರಶ್ನೆ ಯಾಕಪ್ಪ ಅಂದ್ರೆ ಸಚಿವ ಸಂತೋಷ್ ಲಾಡ್ ಹಾಗೂ ಜನಾರ್ದನ ರೆಡ್ಡಿ ನಿನ್ನೆ ರಾತ್ರಿ ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ರೆಡ್ಡಿ ಹಾಗೂ ಲಾಡ್ ನಡುವೆ ರಹಸ್ಯ ಮಾತುಕತೆ ಕೂಡ ನಡೆದಿದೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಸಚಿವ ಸಂತೊಷ್ ಲಾಡ್ ಹೊಸಪೇಟೆ ಆನಂದ್ ಸಿಂಗ್ ಅವ್ರನ್ನ ಕಾಂಗ್ರೆಸ್​ಗೆ ಕರೆತಂದಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ಭೇಟಿ ಕುತೂಹಲ ಮೂಡಿಸಿದೆ. ಜನಾರ್ದನ ರೆಡ್ಡಿ ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಅಲ್ಲದೇ ರೆಡ್ಡಿ ಹಾಗೂ ಸಂತೋಷ್ ಲಾಡ್ ಭೇಟಿಯಾಗಿರೋದು ನಿಜ ಅಂತ ಸಂತೋಷ್ ಸಹೋದರ ಶಾಸಕ ಅನಿಲ್ ಲಾಡ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ಅವರೆಲ್ಲರೂ ಒಂದು ಕಾಲದಲ್ಲಿ ವಿರೋಧಿಸುತ್ತಾ ಹೋರಾಟ ನಡೆಸುತ್ತಿದ್ದ ಉದ್ಯಮಿ ಅಶೋಕ್ ಖೇಣಿ ಸೇರ್ಪಡೆಯಾಗಿದ್ದಾರೆ, ಅತ್ತ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗಣಿ ಹಗರಣದ ಕೊಳೆ ಮೆತ್ತಿಕೊಂಡಿರುವ ಸತೀಶ ಸೈಲ್ ಕಾಂಗ್ರೆಸ್ ಪಕ್ಷದ ಟಿಕೆಟ್ ನಲ್ಲಿ ಈ ಬಾರಿ ಸ್ಪರ್ಧಿಸಲಿದ್ದಾರೆ, ಗಣಿಲೂಟಿ ಸಂಧರ್ಭದಲ್ಲಿ ರೆಡ್ಡಿ ಪಾಳಯದಲ್ಲಿದ್ದ ಆನಂದ್ ಸಿಂಗ್ ಮತ್ತು ನಾಗೇಂದ್ರ ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ತಯಾರಾಗಿದ್ದಾರೆ ಹಾಗಾಗಿ ಜನಾರ್ದನ ರೆಡ್ಡಿ ಸೇರ್ಪಡೆಯೂ ಕಾಂಗ್ರೆಸ್ ಪಾಲಿಗೆ ದೊಡ್ಡ ವಿಷಯವೇ ಅಲ್ಲ ಅನ್ನಬಹುದು. ಗೆಲ್ಲುವ ಕುದುರೆಗೆ ಮಣೆ ಹಾಕುವ ಅದೇ ರೀತಿ ಆರ್ಥಿಕವಾಗಿ ಸದೃಢವಾಗಿರುವ ಉದ್ಯಮಿಗಳನ್ನು ವಿರೋಧದ ನಡುವೆಯು ಪಕ್ಷಕ್ಕೆ ಸೇರ್ಪಡೆ ಮಾಡಿಸುತ್ತಿರುವ ಕಾಂಗ್ರೆಸ್ ಇದೀಗ ರೆಡ್ಡಿ ವಿಚಾರದಲ್ಲಿ ಯಾವ ರಾಜಕೀಯ ದಾಳ ಉದುರಿಸುತ್ತೆ ಕಾದು ನೋಡಬೇಕು.

Leave a Reply

Your email address will not be published. Required fields are marked *