ಬಿಜೆಪಿ ಭಿನ್ನಮತ!: ಕಾಮುಕ ರಾಮದಾಸ್’ಗೆ ಟಿಕೆಟ್ ನೀಡಿದರೆ ಸುಮ್ಮನಿರಲ್ಲ ಎಂದ ಗೋಮಧುಸೂದನ್!
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ರಾಜಕೀಯ ನಾಯಕರು ಪರಸ್ಪರ ವಾಕ್ಸಮರದ ಕೆಸರೆರಚಾಟದಲ್ಲಿ ತೊಡಗುವುದು, ಪಕ್ಷಾಂತರಗೊಳ್ಳುವುದು ಚುನಾವಣೆಯ ಸಂಧರ್ಭದಲ್ಲಿ ಸಾಮಾನ್ಯ. ಟಿಕೆಟ್ ಸಿಗದವರು ಬಂಡಾಯವೆದ್ದು ಸೇಡು ತೀರಿಸುವುದು, ಒತ್ತಡ ಹೇರಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಈ ಸಮಯದಲ್ಲಿ ನೋಡಬಹುದು. ಬಿಜೆಪಿ ತನ್ನ ಮೊದಲ ಟಿಕೆಟ್ ಪಟ್ಟಿ ಬಿಡುಗಡೆ ಮಾಡಿದ ಕೂಡಲೇ ಬಿಜೆಪಿಯಲ್ಲಿ ಹಲವೆಡೆ ಭಿನ್ನಮತ ಸ್ಫೋಟಗೊಂಡಿದೆ.
ಇದೀಗ ಎರಡನೇ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ಬಿಜೆಪಿಯ ನಿಷ್ಠಾವಂತ ಮುಖಂಡ, ಆರ್ಎಸ್ಎಸ್ ಹಿನ್ನೆಲೆಯ ಗೋಮಧುಸೂದನ್ ಈ ಬಾರಿ ಪಕ್ಷದ ಸಂಭಾವ್ಯ ಟಿಕೆಟ್ ಆಕಾಂಕ್ಷಿ ವಿರುದ್ಧ ಧ್ವನಿ ಎತ್ತಿದ್ದಾರೆ. “ಕಳಂಕಿತ ರಾಮದಾಸ್ ಗೆ ಟಿಕೆಟ್ ಕೊಡಬೇಡಿ. ರಾಮದಾಸ್ ಗೆ ಇಡೀ ಕೆ.ಆರ್. ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಂಪೂರ್ಣ ವಿರೋಧವಿದೆ. ಸಾಮಾನ್ಯ ಕಾರ್ಯಕರ್ತ ನಿಂತರೂ ಬಿಜೆಪಿ ಗೆಲ್ಲುವ ಏಕೈಕ ಕ್ಷೇತ್ರ ಕೃಷ್ಣರಾಜ. ಕಳಂಕಿತ ವ್ಯಕ್ತಿಗೆ ಟಿಕೆಟ್ ನೀಡಿ ಕ್ಷೇತ್ರ ಕಳೆದುಕೊಳ್ಳಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದೊಮ್ಮೆ ರಾಮದಾಸ್ ಗೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ. ಪಕ್ಷ ತೆಗೆದುಕೊಳ್ಳುವ ಅಂತಹ ತೀರ್ಮಾನವನ್ನು ನಾನು ವಿರೋಧಿಸುತ್ತೇನೆ. ರಾಮದಾಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರನಾಗಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಮಧುಸೂದನ್ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ರಾಮದಾಸ್ ರ ಯಾವ ಒತ್ತಡಕ್ಕೂ ಮಣಿಯದೆ ಟಿಕೆಟ್ ನಿರಾಕರಿಸಬೇಕು. ನಾನು ಹುಟ್ಟು ಹೋರಾಟಗಾರ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದೆ. ಮೈಸೂರಿನ ಎಲ್ಲಾ ಬೆಳವಣಿಗೆ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಇವತ್ತು ನನ್ನೊಳಗೆ ಪುಟಿದೆದ್ದಿರುವ ಭಾವೋದ್ವೇಗದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ ಎಂದರು.