ಭದ್ರತೆಯನ್ನು ಹಿಂತೆಗೆದುಕೊಳ್ಳುವ ಮೂಲಕ ನಿತೀಶ್ ಕುಮಾರ್ ನಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ: ರಾಬ್ರಿ ದೇವಿ ಆರೋಪ
ನ್ಯೂಸ್ ಕನ್ನಡ ವರದಿ(12-04-2018): ಬಿಹಾರದ ನಿತೀಶ್ ಕುಮಾರ್ ಸರಕಾರವು ಮಾಜಿ ಮುಖ್ಯ ಮಂತ್ರಿಗಳ ನಿವಾಸಕ್ಕೆ ನೀಡಿದ ಭದ್ರತೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ನಮ್ಮನ್ನು ಕೊಲ್ಲಲು ಷಡ್ಯಂತ್ರ ಮಾಡುತ್ತಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಆರೋಪಿಸಿದ್ದಾರೆ.
ತಮ್ಮ ನಿವಾಸದ ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿದ ನಿತೀಶ್ ಕುಮಾರ್ ಸರಕಾರದ ಕ್ರಮವನ್ನು ಖಂಡಿಸಿ ರಾಬ್ರಿ ದೇವಿ ಹಾಗೂ ಮಕ್ಕಳಾದ ತೇಜಸ್ವೀ ಯಾದವ್ ಹಾಗೂ ತೇಜ್ ಪ್ರತಾಪ್ ತಮಗೆ ನೀಡಿರುವ ಭದ್ರತೆಯನ್ನು ಸರಕಾರಕ್ಕೆ ಹಿಂತಿರುಗಿಸಿದ್ದಾರೆ. ತನ್ನ ಹಾಗೂ ಮಕ್ಕಳ ಈ ನಿರ್ಧಾರವನ್ನು ರಾಬ್ರಿ ದೇವಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಮುಖ್ಯ ಮಂತ್ರಿ ನಿತೀಶ್ ಅವರು ಮಾಜಿ ಮುಖ್ಯಮಂತ್ರಿಗಳಿಬ್ಬರ ಮನೆಗೆ ನೀಡಿದ್ದ 18 ಮಂದಿ ಭದ್ರತಾ ಸಿಬ್ಬಂದಿಗಳನ್ನು ರಾತ್ರೋ ರಾತ್ರಿ ಹಿಂಪಡೆದಿದ್ದಾರೆ. ಆದುದರಿಂದ ನಾನು ಹಾಗೂ ನನ್ನಿಬ್ಬರು ಮಕ್ಕಳಿಗೆ ರಾಜ್ಯ ಸರಕಾರ ನೀಡಿದ ಎಲ್ಲಾ ಭದ್ರತೆಗಳನ್ನು ಹಿಂತಿರುಗಿಸುತ್ತಿದ್ದೇವೆ. ಈ ಎಲ್ಲಾ ಸಿಬ್ಬಂದಿಗಳನ್ನು ನಿತೀಶ್ ಕುಮಾರ್ ತನ್ನ ಭದ್ರತೆಗಾಗಿ ನಿಯೋಜಿಸಲಿ ಎಂದು ರಾಬ್ರಿ ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.