ಇತಿಹಾಸದಲ್ಲೇ ಪ್ರಥಮ ಬಾರಿ ಫ್ಯಾಶನ್ ಶೋ ಆಯೋಜಿಸಿದ ಸೌದಿ ಅರೇಬಿಯಾ!
ನ್ಯೂಸ್ ಕನ್ನಡ ವರದಿ-(12.04.18): ಸೌದಿ ಅರೇಬಿಯಾವು ಇಸ್ಲಾಮಿಕ್ ರಾಷ್ಟ್ರವಾಗಿದ್ದು, ಇಲ್ಲಿ ಸಂಗೀತ ಕಾರ್ಯಕ್ರಮಗಳು, ಸಿನಿಮಾಗಳು ಮತ್ತು ಅಶ್ಲೀಲತೆಯನ್ನು ಪ್ರಚೋದಿಸುವ ಕಾರ್ಯಗಳನ್ನು ವಿರೋಧಿಸಲಾಗುತ್ತಿತ್ತು. ಅಲ್ಲದೇ ಇಸ್ಲಾಮಿಕ್ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಇದೀಗ ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರವರು ಹಲವಾರು ಸಂಪ್ರದಾಯಗಳಿಗೆ ಕತ್ತರಿ ಹಾಕಿದ್ದಾರೆ. ಸೌದಿ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವಲ್ಲಿಂದ ಹಿಡಿದು ಇದೀಗ ಫ್ಯಾಶನ್ ಶೋ ಕಾರ್ಯಕ್ರಮವನ್ನೂ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ದೇಶದ ಮಾಡೆಲ್ ಗಳು ಭಾಗವಹಿಸಿದ್ದರು. ಸೌದಿ ಅರೇಬಿಯಾದಂತಹ ಇಸ್ಲಾಮಿಕ್ ರಾಷ್ಟ್ರದಲ್ಲಿ ಫ್ಯಾಶನ್ ವೀಕ್ ಕಾರ್ಯಕ್ರಮ ನಡೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ಸಂತೋಷದ ಸಂಗತಿ ಎಂದು ಭಾಗವಹಿಸಿದ್ದ ಮಾಡೆಲ್ ಗಳು ತಿಳಿಸಿದ್ದಾರೆ. ಉದ್ಘಾಟನಾ ಸಮಾರಣಭವು ಮಹಿಳೆಯರಿಗೆ ಮತ್ತು ಪುರುಷರಿಗೆ ಮುಕ್ತವಾಗಿದ್ದು, ಆದರೆ ರ್ಯಾಂಪ್ ವಾಕ್ ಕಾರ್ಯಕ್ರಮಕ್ಕೆ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿದು ಬಂದಿದೆ.