ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದಿದ್ದಕ್ಕೆ 4ನೇ ಅಂತಸ್ತಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!
ನ್ಯೂಸ್ ಕನ್ನಡ ವರದಿ-(12.04.18): ಶಾಲಾ ಕಾಲೇಜುಗಳ ಪರೀಕ್ಷೆಯನ್ನು ಎದುರಿಸುವ ಬಗೆ ತಿಳಿದಿದ್ದರೂ ಜೀವನದ ಪಾಠ ಎದುರಿಸುವಲ್ಲಿ ಹಲವು ವಿದ್ಯಾರ್ಥಿಗಳು ವಿಫಲರಾಗುತ್ತಿದ್ದಾರೆ. ಇದೀಗ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದಕ್ಕೆ ವಿದ್ಯಾರ್ಥಿಯೋರ್ವ ನಾಲ್ಕನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಸಚಿನ್ ವಾಘ್ (19) ಎಂದು ಗುರುತಿಸಲಾಗಿದೆ.
ಸಚಿನ್ ವಾಘ್ ಔರಂಗಾಬಾದ್ ನಲ್ಲಿ ಕಾಲೇಜೊಂದರಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡುತ್ತಿದ್ದಾಗ ಪ್ರಾಂಶುಪಾಲರ ಕೈಗೆ ಸಿಕ್ಕಿಬಿದ್ದಿದ್ದು, ಪ್ರಾಂಶುಪಾಲರು ಪೋಷಕರನ್ನು ಕರೆತರುವಂತೆ ಸೂಚಿಸಿದ್ದರು ಎನ್ನಲಾಗಿದೆ. ಇದರಿಂದ ಅವಮಾನ ಮತ್ತು ಭಯಗೊಂಡ ವಿದ್ಯಾರ್ಥಿಯು ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಈ ಕುರಿತು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.