8ರ ಹರೆಯದ ಆಸೀಫಾ ರೇಪ್ ಆ್ಯಂಡ್ ಮರ್ಡರ್: ಹೌದು! ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ!

ಹೌದು ನರೇಂದ್ರ ಮೋದಿ ಚುನಾವಣೆಗೆ ಮೊದಲು ಹೇಳಿದ ಆಶ್ವಾಸನೆಯಂತೆ ಅವರ ಆಡಳಿತಾವಧಿಯಲ್ಲಿ ನಾವು ಈ ದೇಶದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇದುವರೆಗೆ ಕೇಳದ್ದನ್ನು ಕೇಳುತ್ತಿದ್ದೇವೆ, ಇಷ್ಟರ ತನಕ ನೋಡದ್ದನ್ನು ನೋಡುತ್ತಿದ್ದೇವೆ. ಇದಕ್ಕೊಂದು ಹೊಸ ಸೇರ್ಪಡೆ ಜಮ್ಮುವಿನ ಎಂಟರ ಹರೆಯದ ಆಸಿಫಾ ಎಂಬ ಮುಗ್ದ ಬಾಲಕಿಯ ರೇಪ್ ಆ್ಯಂಡ್ ಮರ್ಡರ್..

ಈ ಘಟನೆಯನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ. ಕಳೆದ ಫೆಬ್ರವರಿಯಲ್ಲಿ ಜಮ್ಮುವಿನ ಕಥುವಾ ಎಂಬಲ್ಲಿ ಕುದುರೆ ಕಾಯುವ ಅಲೆಮಾರಿ ಗುಂಪಿನ 8 ವರ್ಷ ಪ್ರಾಯದ ಆಸಿಫಾ ಎಂಬ ಹುಡುಗಿ ತನ್ನ ಮನೆಯ ಹಿಂದಿನ ಕಾಡಿನಲ್ಲಿ ಕುದುರೆ ಮೇಯಿಸಲು ಹೋದವಳು ಶವವಾಗಿ ಬಿದ್ದಿರುತ್ತಾಳೆ. ಮೊದಲಿಗೆ ಸಹಜ ಸಾವೆಂದು ಪ್ರಕರಣವನ್ನು ಮುಚ್ಚಿ ಹಾಕಲು ಪೋಲೀಸರು ಪ್ರಯತ್ನ ಪಟ್ಟರೂ, ಬಖೇರ್ ವಾಲ್ ಸಮುದಾಯದ ತೀವೃ ಪ್ರತಿಭಟನೆಯ ಬಳಿಕ ಸರಕಾರವು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿತ್ತು. ಅಪರಾಧ ವಿಭಾಗದ ತನಿಖಾ ವರದಿಯು ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತು.

ಕುದುರೆ ಕಾಯಲು ಕಾಡಿಗೆ ಹೋದ ಬಾಲಕಿಯನ್ನು ಅಪಹರಿಸಿದ ದುರುಳರು ಆ ಬಾಲಕಿಯನ್ನು ದೂರದ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಆಕೆಗೆ ನಿದ್ರಾ ಮಾತ್ರೆಗಳನ್ನು ನೀಡಿ ಸತತವಾಗಿ ಮೂರು ದಿನ ದೇವಸ್ಥಾನದಲ್ಲೇ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದರು. ಆರೋಪಿಗಳ ಪೈಕಿ ಓರ್ವನನ್ನು ಕೇವಲ ಬಾಲಕಿಯನ್ನು ಅತ್ಯಾಚಾರ ಮಾಡಲೋಸ್ಕರ ಮೀರತ್ ನಿಂದ ಕರೆ ತರಲಾಗುತ್ತದೆ. ನಿರಂತರವಾಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಬಾಲಕಿ ಸತ್ತ ನಂತರ ಸಮೀಪದ ಕಾಡಿನಲ್ಲಿ ಶವವನ್ನು ಎಸೆಯುತ್ತಾರೆ. ಬಾಲಕಿ ಸತ್ತಿದ್ದಾಳೆಂದು ದೃಢ ಪಡಿಸಲು ಬಾಲಕಿಯ ತಲೆಯ ಮೇಲೆ ಎರಡು ಕಲ್ಲನ್ನು ಸಹ ಎತ್ತಿ ಹಾಕುತ್ತಾರೆ.
ಬಾಲಕಿ ಕಾಣೆಯಾಗಿದ್ದಾಳೆಂದು ಬಾಲಕಿಯ ತಂದೆ ನೀಡಿದ್ದ ದೂರಿನ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳು ಪೋಲಿಸರಿಗೆ 1.5 ಲಕ್ಷ ರೂಪಾಯಿ ಲಂಚವನ್ನೂ ನೀಡುತ್ತಾರೆ. ಲಂಚ ಪಡೆದ ಪೋಲಿಸರು ಆರೋಪಿಗಳನ್ನು ಪ್ರಥಮ ಹಂತದಲ್ಲಿ ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ. ನಂತರ ಸರಕಾರವು ಪ್ರಕರಣ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ ನಂತರ ಆರೋಪಿಗಳೊಂದಿಗೆ ಶಾಮೀಲಾದ ಪೋಲಿಸರ ಬಣ್ಣವೂ ಬಯಲಾಗಿದೆ.

ಆರೋಪಿಗಳನ್ನು ಹಾಗೂ ಆರೋಪಿಗಳಿಗೆ ಸಹಕರಿಸಿದ ಪೋಲಿಸ್ ಅಧಿಕಾರಿಗಳನ್ನೂ ಬಂದಿಸಿದ ತನಿಖಾ ಸಂಸ್ಥೆಯು ತನ್ನ 18 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಿದೆ.

ಎಂಟು ವರ್ಷದ ಅಲೆಮಾರಿ ಬಾಲೆ ಅಸಿಫಾಳನ್ನು ಅಪಹರಿಸಿ ದೇವಸ್ಥಾನದಲ್ಲಿ ಕೂಡಿಹಾಕಿ ಆಕೆಗೆ ನಿದ್ರಾ ಗುಳಿಗೆಯನ್ನು ನೀಡಿ ನಿರಂತರ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆಮಾಡಿದ ಇಂತಹ ಮನುಷ್ಯತ್ವದ ಅಸ್ತಿತ್ವನ್ನೇ ಪ್ರಶ್ನಿಸುವಂತಹ ಪ್ರಕರಣವೊಂದು ನಮ್ಮ ದೇಶದಲ್ಲಿ ವರದಿಯಾಗುವ ಮೂಲಕ ಭಾರತವು ವಿಶ್ವದ ಎದುರು ತಲೆತಗ್ಗಿಸುವಂತಾಗಿದೆ. ನಾನು ಪ್ರಧಾನಿಯಾದರೆ ನೀವು ಹಿಂದೆಂದೂ ನೋಡದ ಭಾರತವನ್ನು ನೋಡಲಿದ್ದೀರಿ ಎಂದು ಹೇಳಿದ ನರೇಂದ್ರ ಮೋದಿಯವರ ಮಾತಿನ ಅರ್ಥ ಈಗ ಸ್ಪಷ್ಟವಾಗುತ್ತಿದೆ.

-ಎಸ್.ಎ.ರಹಿಮಾನ್ ಮಿತ್ತೂರು

Leave a Reply

Your email address will not be published. Required fields are marked *