ಮುಸ್ಲಿಮರಾದ ಅಬ್ದುಲ್ ಕಲಾಂ ನನಗೆ ಆದರ್ಶ, ಮುಸಲ್ಮಾನರೂ ನನ್ನನ್ನು ಪ್ರೀತಿಸುತ್ತಾರೆ!: ಈಶ್ವರಪ್ಪ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈ ಬಾರಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಬಿಜೆಪಿಯ ರಾಜ್ಯದ ಹಿರಿಯ ನಾಯಕರುಗಳಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಇದ್ದ ಶೀತಲ ಸಮರ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಅವರ ಸಂಧಾನದಿಂದ ಶಮನವಾಗಿದೆ ಎಂದು ಭಾವಿಸಲಾಗುತ್ತಿದೆ. ಇದರ ಪರಿಣಾಮವೇ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಈಶ್ವರಪ್ಪ ಹೆಸರು ಘೋಷಣೆಯಾಗಿದೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಬಗ್ಗೆ ಮತ್ತು ತಮ್ಮ ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ ನಾನು ಕೇವಲ ಕುರುಬ ಸಮಾಜದ ನಾಯಕನಲ್ಲ ನಾನು ಹಿಂದೂ ಸಮಾಜದ ನಾಯಕ, ನನ್ನನ್ನು ಲಿಂಗಾಯತ, ಒಕ್ಕಲಿಗ, ಕುರುಬ ಎಲ್ಲಾ ಜಾತಿಯ ಜನರೂ ಪ್ರೀತಿಸುತ್ತಾರೆ ಮತ್ತು ಮುಸಲ್ಮಾನರೂ ಪ್ರೀತಿಸುತ್ತಾರೆ.

ನನಗೆ ಮುಸ್ಲಿಮರಾದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಆದರ್ಶ ವ್ಯಕ್ತಿ, ನಾನು ಕೊಲೆಗಾರ ಮುಸ್ಲಿಮರನ್ನು ಮಾತ್ರ ಕೊಲೆಗಡುಕ ಎನ್ನುತ್ತೇನೆ ಆದರೆ ಕಾಂಗ್ರೆಸ್ ಪಕ್ಷದವರು ಮಾತ್ರ ನಾನು ಎಲ್ಲಾ ಮುಸಲ್ಮಾನರನ್ನು ಕೊಲೆಗಡುಕರೆಂದೆ ಎಂದು ಅಪಪ್ರಚಾರ ನಡೆಸುತ್ತಾರೆ ಹಾಗಾಗಿ ನನಗೆ ಮುಸ್ಲಿಮರ ಮತ ಕಮ್ಮಿ ಬರುತ್ತೆ, ಆದರೂ ಸಾಕಷ್ಟು ಮುಸ್ಲಿಮರು ನನಗೆ ಮತ ಹಾಕಿದ್ದಾರೆ, ಇನ್ನೂ ಹಾಕುತ್ತಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *