ಉತ್ತರ ಪ್ರದೇಶ: ಸಂವಿಧಾನ ಶಿಲ್ಪಿಯ ಪ್ರತಿಮೆಗೂ ಕಬ್ಬಿಣದ ಪಂಜರದ ರಕ್ಷಣೆ!
ನ್ಯೂಸ್ ಕನ್ನಡ ವರದಿ(13-04-2018): ದೇಶದಲ್ಲಿರುವ ನಾಯಕರ ಪ್ರತಿಮೆಗಳನ್ನು ಹಾನಿಗೈಯುತ್ತಿರುವ ದುಷ್ಕರ್ಮಿಗಳ ದುಷ್ಕ್ರತ್ಯಕ್ಕೆ ಕಡಿವಾಣ ಹಾಕಲಾರದೆ ಉತ್ತರ ಪ್ರದೇಶ ಸರಕಾರಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಕಬ್ಬಿಣದ ಪಂಜರವನ್ನು ನಿರ್ಮಿಸುವ ಮೂಲಕ ರಕ್ಷಣೆ ಮಾಡಬೇಕಾದ ದುಸ್ಥಿತಿ ಎದುರಾಗಿದೆ.
ಕೆಲವು ದಿನಗಳ ಹಿಂದೆ ಬುದೌನ್ ಸಮೀಪದ ಅಂಬೇಡ್ಕರ್ ಪ್ರತಿಮೆಯನ್ನು ಕಿಡಿಗೇಡಿಗಳು ಹಾನಿಗೈದಿದ್ದು, ನಂತರ ಜಿಲ್ಲಾಡಳಿತವು ಪ್ರತಿಮೆಯನ್ನು ನವೀಕರಿಸಿ ಕೇಸರಿ ಬಣ್ಣವನ್ನು ಬಳಿದಿತ್ತು. ಆನಂತರ ಕೇಸರಿಮಯವಾಗಿದ್ದ ಅಂಬೇಡ್ಕರ್ ಪ್ರತಿಮೆಗೆ ಬಿಎಸ್ ಪಿ ಮುಖಂಡ ನೀಲಿ ಬಣ್ಣ ಬಳಿದಿದ್ದರು. ಇದೀಗ ನೀಲಿ ಬಣ್ಣದ ಪ್ರತಿಮೆಗೆ ಕಬ್ಬಿಣದ ಪಂಜರ ನಿರ್ಮಿಸಿ ಪೋಲಿಸ್ ಸಿಬ್ಬಂದಿಯೊಬ್ಬನನ್ನು ಕಾವಲು ಕಾಯಲು ನೇಮಿಸಲಾಗಿದೆ.
ಎಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಹಾನಿಗೆಡುವ ಸಾಧ್ಯತೆಯಿದ್ದು, ಅದಕ್ಕಾಗಿ ಪ್ರತಿಮೆಗೆ ಈ ಕಬ್ಬಿಣದ ಪಂಜರವನ್ನು ನಿರ್ಮಿಸಿ ಕಾವಲು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.