16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನನ್ನು ವಶಕ್ಕೆ ಪಡೆದ ಸಿಬಿಐ!
ನ್ಯೂಸ್ ಕನ್ನಡ ವರದಿ-(13.04.18): ಉತ್ತರಪ್ರದೇಶದಲ್ಲಿ ದಿನಕಳೆದಂತೇ ಕ್ರಿಮಿನಲ್ ಕೃತ್ಯಗಳು ಹೆಚ್ಚಾಗುತ್ತಿವೆ. ಕ್ರಿಮಿನಲ್ ಗಳನ್ನು ರಕ್ಷಿಸುವ ಕಾರ್ಯವನ್ನು ಉತ್ತರಪ್ರದೇಶ ಸರಕಾರ ಮಾಡುತ್ತಿದೆ. ಮೊನ್ನೆ ತಾನೇ 16 ವರ್ಷ ವಯಸ್ಸಿನ ಬಾಲಕಿಯೋರ್ವಳನ್ನು ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಎಂಬಾತ ಅತ್ಯಾಚಾರ ನಡೆಸಿದ್ದು, ಈ ಕುರಿತು ಬಾಲಕಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಲು ಯತ್ನಿಸಿದ್ದಳು. ಇದೀಗ ಕೊನೆಗೂ ಆರೋಪಿಯಾದ ಬಿಜೆಪಿ ಶಾಸಕನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನನ್ನು ವಶಕ್ಕೆ ಪಡೆದುಕೊಂಡ ಸಿಬಿಐ ಇದೀಗ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಲಕ್ನೋದಲ್ಲಿನ ಕುಲದೀಪ್ ಸಿಂಗ್ ನ ನಿವಾಸಕ್ಕೆ ಇಂದು ಬೆಳಗ್ಗೆ 4 ಗಂಟೆಗೆ ತೆರಳಿದ ಸಿಬಿಐ ತಂಡ ಕುಲದೀಪ್ ನನ್ನು ವಶಕ್ಕೆ ಪಡೆದುಕೊಂಡಿದೆ. ಈ ಪ್ರಕರಣದ ಕುರಿತಾದಂತೆ ಇರುವ ಎಲ್ಲಾ ದಾಖಲೆಗಳನ್ನು ಕೂಡಲೇ ನೀಡಬೇಕೆಂದು ಸಿಬಿಐ ಉತ್ತರಪ್ರದೇಶ ಪೊಲೀಸರಿಗೆ ತಿಳಿಸಿದೆ. ಈ ಬಾಲಕಿಯ ತಂದೆಯು ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.