ಬಿಜೆಪಿಯವರಿಂದಾಗಿ ‘ನಾನೊಬ್ಬ ಹಿಂದೂ’ ಎನ್ನಲೂ ನನಗೆ ನಾಚಿಕೆಯಾಗುತ್ತಿದೆ!: ಅರ್ನಬ್ ಗೋಸ್ವಾಮಿ

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಸಂಚಲನ ಮೂಡಿಸಿರುವ, ಮಾಧ್ಯಮಗಳಲ್ಲಿ ಚರ್ಚೆಯಲ್ಲಿರುವ, ಜಮ್ಮುವಿನ ಕಥುವಾದಲ್ಲಿ ನಡೆದಿರುವ ಅತ್ಯಂತ ಆಘಾತಕಾರಿ ಎಂಟು ವರ್ಷದ ಬಾಲಕಿ ಆಸಿಫಾ ಸಾಮೂಹಿಕ ಅತ್ಯಾಚಾರ ಹಾಗು ಭೀಬತ್ಸ ಕೊಲೆ ಪ್ರಕರಣದ ಬಗ್ಗೆ ಸತತವಾಗಿ ಮೂರು ದಿನಗಳಿಂದ ಪ್ರೈಮ್ ಟೈಮ್ ನಲ್ಲಿ ಚರ್ಚಾ ಕಾರ್ಯಕ್ರಮ ನಡೆಸುತ್ತಿರುವ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಮಗುವಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಆರೋಪಿಗಳ ಪರವಾಗಿ ಬಿಜೆಪಿ ನಾಯಕರು ಹಿಂದುತ್ವವಾದಿ ಅಂಜೆಡಾ ಮೂಲಕ ಕೋಮುಬಣ್ಣ ಹಚ್ಚಿ ಬೆಂಬಲ ನೀಡಿರುವುದರ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ ನಿಮ್ಮಂತಹ ಬಿಜೆಪಿ ನಾಯಕರಿಂದಾಗಿ ನನಗೆ ನಾನೊಬ್ಬ ಹಿಂದೂ ಎನ್ನಲೂ ನಾಚಿಕೆಯಾಗುತ್ತಿದೆ ಎಂದು ಹೇಳಿದರು.

ಬಖೆರ್‌ವಾಲ್ ಮುಸ್ಲಿಂ ಅಲೆಮಾರಿ ಗುಂಪನ್ನು ಬೆದರಿಸಿ ಜಮ್ಮು ಸಮೀಪದ ಕಥುವಾ ರಸನ ಗ್ರಾಮದಿಂದ ಓಡಿಸುವ ಸಲುವಾಗಿ ಸ್ಥಳೀಯ ದೇವಸ್ಥಾನದಲ್ಲಿ ಈ ಸಾಮೂಹಿಕ ಅತ್ಯಾಚಾರ ನಿರಂತರವಾಗಿ ಹಲವು ದಿನಗಳು ನಡೆದಿವೆ, ಬಾಲಕಿ ಆಸಿಫಾಳನ್ನು ಕೊಂದ ನಂತರವೂ ಪಿಶಾಚಿಗಳು ಮನಬಂದಂತೆ ಅತ್ಯಾಚಾರ ನಡೆಸಿದ್ದಾರೆ, ಇಂತಹ ಕೃತ್ಯ ಎಸಗಿದ ಆರೋಪಿಗಳ ಬೆಂಬಲಕ್ಕಾಗಿ ಬಿಜೆಪಿಯ ರಾಜಕಾರಣಿಗಳು ಹಿಂದೂ ಏಕತಾ ಮಂಚ್ ಎಂಬ ಸಂಘಟನೆ ಹುಟ್ಟುಹಾಕಿದ್ದಾರೆ. ಆರೋಪಿಗಳಿಗೆ ಬೆಂಬಲ ಸೂಚಿಸಿ ಅವರ ಪರವಾಗಿ ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಸಂಪುಟದ ಬಿಜೆಪಿ ಸಚಿವರಾದ ಲಾಲ್ ಸಿಂಗ್ ಹಾಗೂ ಚಂದ್ರ ಪ್ರಕಾಶ್ ಗಂಗಾ ಭಾಗವಹಿಸಿದ್ದಾರೆ, ಬಿಜೆಪಿ ಇಷ್ಟು ಕೀಳಮಟ್ಟಕ್ಕೆ ಇಳಿದು ಅತ್ಯಾಚಾರಿಗಳಿಗೆ ಬೆಂಬಲ ನೀಡುವುದನ್ನು ದೇಶಾದ್ಯಂತ ಜನರು ಬೀದಿ ಬೀದಿಗಳಲ್ಲಿ ಪ್ರಶ್ನಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಹಿಂದೂ ಏಕತಾ ಮಂಚ್ ಎಂಬುವುದು ಹಿಂದೂ ಸಂಘಟನೆಯಲ್ಲ, ಇಂತಹ ಅತ್ಯಾಚಾರಿಗಳಿಗೆ ಬೆಂಬಲ ಸೂಚಿಸುವವರು ಹಿಂದೂ ಧರ್ಮದ ಪ್ರತಿನಿಧಿಗಳಾಗಲು ಸಾಧ್ಯವಿಲ್ಲ. ಅತ್ಯಾಚಾರಿಗಳ ರಕ್ಷಣೆಯನ್ನು ಧರ್ಮದ ಹೆಸರಿನಲ್ಲಿ ಮಾಡಲು ಸಾಧ್ಯವೇ ಇಲ್ಲ, ಹಿಂದುತ್ವ, ರಾಷ್ಟ್ರೀಯವಾದಿ, ದೇಶಪ್ರೇಮ ಮುಂತಾದ ಕಪಟ ಮುಖವಾಡ ಧರಿಸಿ ಅತ್ಯಾಚಾರಿಗಳ ಪರವಾಗಿ ಖುಲ್ಲಂಖುಲ್ಲಾ ಬೀದಿಗಿಳಿದಿರುವ ಬಿಜೆಪಿ ನಾಯಕರನ್ನು ಕೂಡಲೇ ಕಿತ್ತೊಗೆಯಬೇಕು. ನಾವು ಬಾಲಕಿ ಆಸಿಫಾಗೆ ನ್ಯಾಯ ಸಿಗುವವರೆಗೂ ನಿರಂತರವಾಗಿ ಧ್ವನಿ ಎತ್ತುತ್ತೇವೆ, ಇಡೀ ದೇಶವೇ ಧ್ವನಿ ಎತ್ತಲಿದೆ, ಬಿಜೆಪಿಯವರೇ ಎಷ್ಟು ಕೀಳುಮಟ್ಟಕ್ಕೆ ಇಳಿದು ಮುಜುಗರ ಅನುಭವಿಸಲು ಸಿದ್ಧರಿದ್ದೀರಾ ನೋಡಿಯೇ ಬಿಡೋಣ ಎಂದು ಅರ್ನಬ್ ಗೋಸ್ವಾಮಿ ಬಿಜೆಪಿ ಪರವಾಗಿ ಚರ್ಚೆಯಲ್ಲಿ ಭಾಗವಹಿಸಿದವರ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *