ಹೊಸ ಮನೆಕಟ್ಟಿಸಿ ಗೃಹಪ್ರವೇಶದ ಆಮಂತ್ರಣ ನೀಡಲು ಹೋಗುತ್ತಿದ್ದ ವೇಳೆ ಅಪಘಾತಕ್ಕೆ ಬಲಿಯಾದ ಪೊಲೀಸ್ ಪೇದೆ!
ನ್ಯೂಸ್ ಕನ್ನಡ ವರದಿ-(13.04.18): ಹಲವು ಹೊಸ ಕನಸುಗಳೊಂದಿಗೆ, ಸ್ವಂತ ಮನೆಯೊಮದನ್ನು ಕಟ್ಟಿಸಿ ಅದರಲ್ಲಿ ಮುಂದಿನ ಜೀವನ ನಡೆಸಬೇಕು ಎಂದೆಲ್ಲಾ ಆಗ್ರಹಿಸಿದ ಬಳಿಕವೂ ಆ ಮನೆಯಲ್ಲಿ ವಾಸ್ತವ್ಯ ಹೂಡಲು ಸಾಧ್ಯವಿಲ್ಲವೆಂದಾದರೆ ಹೇಗಿರಬಹುದು? ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೊಂದು ಸದ್ಯ ಸೂತಕದ ಛಾಯೆ ತುಂಬಿದೆ. ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರ ನಿಡಲೆಂದು ತೆರಳಿದ್ದ ಪೊಲೀಸ್ ಪೇದೆಯೋರ್ವ ಮರಳು ತುಂಬಿದ ಟ್ರ್ಯಾಕ್ಟರ್ ಢಿಕ್ಕಿಯಾದ ಕಾರಣ ಮೃತಪಟ್ಟ ಘಟನೆಯು ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತ ಪೊಲೀಸ್ ಪೇದೆಯನ್ನು ನಾಗರಾಜ್(40) ಎಂದು ಗುರುತಿಸಲಾಗಿದೆ. ನಾಗರಾಜ್ ಮತ್ತು ಅವರ ಪುತ್ರಿ ತಮ್ಮ ಹೊಸ ಮನೆಯ ಗೃಹಪ್ರವೇಶದ ಆಮಂತ್ರಣ ಪತ್ರವನ್ನು ಹಂಚಲು ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಮರಳು ತುಂಬಿದ ಟ್ರಾಕ್ಟರ್ ಢಿಕ್ಕಿಯಾಗಿದ್ದು, ತೀವ್ರ ಗಾಯಗಳಾದ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.