ನನಗೆ ನನ್ನ ಮಗಳ ನೆನಪಾಗುತ್ತಿದೆ; ಅರೋಪಿಗಳನ್ನು ಗಲ್ಲಿಗೇರಿಸಿ ನನ್ನ ಮನಸ್ಸಿಗೆ ಸಮಾಧಾನ ನೀಡಿ: ಆಸಿಫಾ ತಂದೆ

ನ್ಯೂಸ್ ಕನ್ನಡ ವರದಿ(13-04-2018): ನನಗೆ ನನ್ನ ಮಗಳ ನೆನಪು ಪದೇ ಪದೇ ಮರುಕಳಿಸುತ್ತಿದೆ. ನಾನು ಮರೆಯಬೇಕೆಂದು ಕೊಂಡರೂ ಆಗುತ್ತಿಲ್ಲ. ಆಕೆಯ ಮುದ್ದು ಮುಖವೇ ನನ್ನ ಕಣ್ಣೆದುರು ಬರುತ್ತಿದೆ ಎಂದು ಜಮ್ಮುವಿನ ಕಥುವಾದಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರವೆಸಗಿ ಕೊಲೆಗೈಯಲ್ಪಟ್ಟ 8ರ ಹರೆಯದ ಬಾಲೆ ಆಸಿಫಾಳ ತಂದೆ ಮಹಮ್ಮದ್ ಯೂಸುಫ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ನನ್ನ ಕುಟುಂಬವನ್ನು ಸಲಹುವ ಸಲುವಾಗಿ ನಾನು ಆ ಮುದ್ದು ಮುಖವನ್ನು ಮರೆಯಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನಗೆ ಸಹಕರಿಸಿ. ದಯವಿಟ್ಟು ನನ್ನ ಕಂದನನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಆ ಆರೋಪಿಗಳನ್ನು ನನ್ನ ಕಣ್ಣೆದುರೇ ನೇಣುಗಂಬಕ್ಕೆ ಏರಿಸುವ ಮೂಲಕ ನನ್ನ ಮನಸ್ಸನ್ನು ಸಮಾಧಾನ ಪಡಿಸಲು ಪ್ರಯತ್ನಿಸಿ ಎಂದು ಅಳುತ್ತಾ ಹೇಳಿದರು.

ಅಮಾಯಕ ಮಗಳ ಅನ್ಯಾಯದ ಸಾವಿನಿಂದ ಮಾನಸಿಕವಾಗಿ ಕುಗ್ಗಿ ಹೋದ ಮಹಮ್ಮದ್ ಯೂಸುಫ್ ಮಾಧ್ಯಮದವರೊಂದಿಗೆ ಮಾತನಾಡುವ ಉದ್ದಕ್ಕೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ನೋಡುಗರ ಕಣ್ಣಲ್ಲೂ ನೀರನ್ನು ಬರಿಸಿತು.

Leave a Reply

Your email address will not be published. Required fields are marked *