ಆಸೀಫಾ ಅತ್ಯಾಚಾರ ಪ್ರಕರಣ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಮ್ ಕೋರ್ಟ್
ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಈ ಪ್ರಕರಣದ ಕುರಿತಾದಂತೆ ಸ್ವಯಂಪ್ರೇರಿತ ವಿಚಾರಣೆಯನ್ನು ನಡೆಸಲು ಸುಪ್ರೀಮ್ ಕೋರ್ಟ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ಕುರಿತಾದಂತೆ ಲಿಖಿತ ವಿವಿರಗಳನ್ನು ಸಲ್ಲಿಸಿದರೆ ಕೂಡಲೇ ಪ್ರಕರಣದ ವಿಚಾರಣೆ ನಡೆಸುತ್ತೇವೆ ಎಂದು ಸುಪ್ರೀಮ್ ಕೊರ್ಟ್ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾದ ವಕೀಲರು ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೆ ಪೊಲೀಸರಿಗೆ ಅಡ್ಡಿಪಡಿಸಿದ ಘಟನೆ ಬಗ್ಗೆ ಲಿಖಿತ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬದವರಿಗೆ ಈ ವಕೀಲರು ಬೆದರಿಕೆಯೊಡ್ಡಿದ್ದಾರೆ ಎಂಬ ಅಂಶಗಳ ಬಗ್ಗೆಯೂ ತಾನು ತಿಳಿಯಲು ಬಯಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್ ವಕೀಲರ ತಂಡವೊಂದು, ಈ ಭಯಾನಕ ಘಟನೆ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದೆ. ಎಲ್ಲ ಮಾಹಿತಿಗಳನ್ನು ಲಿಖಿತರೂಪದಲ್ಲಿ ಸಲ್ಲಿಸುವುದಾಗಿ ಈ ವಕೀಲರು ತಿಳಿಸಿದ್ದಾರೆ.