ತಮ್ಮ ಪಕ್ಷಕ್ಕೆ ಬೆಂಡೆಕಾಯಿ ಚಿಹ್ನೆಯನ್ನು ಬಳಸಿದ ಕಾರಣ ವಿವರಿಸಿದ ಅನುಪಮಾ ಶೆಣೈ!
ನ್ಯೂಸ್ ಕನ್ನಡ ವರದಿ-(13.04.18): ಮಾಜಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಸದ್ಯ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಉಡುಪಿಯ ಕಾಪು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿರುವ ಅನುಪಮಾ ಶೆಣೈ ಬೆಂಡೆಕಾಯಿಯನ್ನು ತಮ್ಮ ಪಕ್ಷದ ಚಿಹ್ನೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಸುದ್ದಿಗಾರರೊಂದಿಗೆ ಮಾತನಾಡಿದ ಅನುಪಮಾ ಶೆಣೈ ತಾನು ಚಿಹ್ನೆಯನ್ನಾಗಿ ಬೆಂಡೆಕಾಯಿಯನ್ನು ಯಾಕೆ ಆಯ್ಕೆ ಮಾಡಿಕೊಂಡೆ ಎಂಬುವುದನ್ನು ವಿವರಿಸಿದ್ದು, ಈ ಮೂಲಕ ತಮ್ಮ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿವೈಎಸ್ಪಿ ಆಗಿದ್ದ ಸಂದರ್ಭದಲ್ಲಿ ಕ್ರಿಮಿನಲ್ ಗಳ, ಅಪರಾಧಿಗಳ ಬೆಂಡೆತ್ತುತ್ತಿದ್ದೆ. ಇದೀಗ ರಾಜಕೀಯಕ್ಕೆ ಬಂದಿದ್ದೇನೆ. ಈಗ ಇಲ್ಲಿನ ಕೆಲವು ರಾಜಕೀಯ ಪಕ್ಷಗಳನ್ನು ಮತ್ತು ಭ್ರಷ್ಟ ರಾಜಕಾರಣಿಗಳನ್ನು ಬೆಂಡೆತ್ತಬೇಕಾಗಿದೆ. ಅದಕ್ಕಾಗಿ ನಾನು ಬೆಂಡೆಕಾಯಿ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ರಾಜಕೀಯಕ್ಕೆ ಕಾಲಿಡಲು ಕಾಂಗ್ರೆಸ್ ಪ್ರೇರಣೆಯಾಗಿದೆ. ನಮ್ಮ ಪಕ್ಷದಲ್ಲಿ ಭಾರತೀಯವೂ ಇದೆ ಕಾಂಗ್ರೆಸ್ಸೂ ಇದೆ. ಎಲ್ಲರೂ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.