ಇಂದು ಪಂಜಾಬ್ ಮತ್ತು ಆರ್‌ಸಿಬಿ ಮುಖಾಮುಖಿ, ಆದರೆ ಗೊಂದಲದಲ್ಲಿ ಕನ್ನಡಿಗರು! ಏಕೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ಹೊಸ ಆವೃತ್ತಿ ಈಗಾಗಲೇ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತವರಿನಲ್ಲಿ ಆರ್ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಆಡಲಿದೆ.

ಕ್ರಿಕೆಟ್ ಕ್ರೇಜ್ ಇರುವ ಅಭಿಮಾನಿಗಳು ಅದರಲ್ಲೂ ಕನ್ನಡಿಗರು ಆರ್‌ಸಿಬಿ ನಮ್ಮ ರಾಜ್ಯದ ತಂಡವಾದ ಕಾರಣ ತುಂಬಾ ನಂಬಿಕೆ ಭರವಸೆ ಇಟ್ಟು ಈ ಬಾರಿ ಕಪ್ಪು ನಮ್ಮದೇ ಎಂಬ ಥೀಮ್ ಸಾಂಗ್ ಜೊತೆ ಬೆಂಬಲಕ್ಕೆ ನಿಂತು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ.

ಆದರೆ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ನಡೆಯುವ ಪಂದ್ಯದಲ್ಲಿ ಮಾತ್ರ ಕ್ರಿಕೆಟ್ ಪ್ರಿಯ ಕನ್ನಡಿಗರು ಸ್ವಲ್ಪ ಗೊಂದಲದಲ್ಲಿದ್ದಾರೆ, ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಮ್ಮ ಕನ್ನಡಿಗರ ತಂಡವಾದರೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಾತ್ರ ನಿಜವಾದ ಅರ್ಥದಲ್ಲಿ ಅತ್ಯುತ್ತಮ ಕನ್ನಡಿಗ ಕ್ರಿಕೆಟಿಗರನ್ನು ಹೊಂದಿದೆ ಮತ್ತು ಮೂವರು ಅತ್ಯುತ್ತಮ ಯುವ ಕನ್ನಡಿಗ ಕ್ರಿಕೆಟಿಗರಿಗೆ ತಂಡದಲ್ಲಿ ಅವಕಾಶ ನಿಡಿದೆ.

ಅವಕಾಶ ನೀಡಿದ್ದನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿರುವ ಕೆ.ಎಲ್ ರಾಹುಲ್ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ್ದರೆ, ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಅವರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಪ್ರಥಮ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದರು. ಇನ್ನು ತನ್ನ ಜೀವನದ ಅತ್ಯಂತ ಶ್ರೇಷ್ಠ ಫಾರ್ಮ್ ನಲ್ಲಿರುವ ಕನ್ನಡದ ಯುವ ಪ್ರತಿಭೆ ಮಯಾಂಕ್ ಅಗರ್ವಾಲ್ ತಮ್ಮ ಗುಣಮಟ್ಟದ ಆಟವನ್ನು ಪ್ರದರ್ಶಿಸಲು ಹಾತೊರೆಯುತ್ತಿದ್ದಾರೆ.

ಒಟ್ಟಾರೆ ಇಂದು ಕರ್ನಾಟಕದ ತಂಡ ಮತ್ತು ಕನ್ನಡಿಗರನ್ನು ಹೊಂದಿದ ತಂಡದ ನಡುವಿನ ಪಂದ್ಯವಾದ ಕಾರಣ ಕ್ರಿಕೆಟ್ ಪ್ರಿಯ ಕನ್ನಡಿಗರು ಸ್ವಲ್ಪ ಗೊಂದಲದಲ್ಲಿದ್ದಾರೆ. ಆದರೂ ಯಾವ ರೀತಿ ಪಂದ್ಯ ರೋಚಕವಾಗಿರುತ್ತೆ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *