ದೇವಾಲಯಗಳ ಆವರಣಗಳಲ್ಲಿ ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ಕರಾಟೆ ಕಲಿಕೆ ಮತ್ತಿತರ ಸ್ವಯಂ ರಕ್ಷಣೆ ತರಬೇತಿಗೆ ಚಿಂತನೆ

ಬೆಂಗಳೂರು: ಯೋಜನೆಯಂತೆ ಎಲ್ಲವೂ ನಡೆದರೆ ಗ್ರಾಮೀಣ ಪ್ರದೇಶದ ಬಾಲಕಿಯರು, ಯುವತಿಯರು ತಮ್ಮ ಊರಿನ ದೇವಾಲಯಗಳಲ್ಲಿ ಸ್ವಯಂ ರಕ್ಷಣೆ ಮತ್ತಿತರ ಕೋರ್ಸ್ ಗಳನ್ನು ಕಲಿಯಬಹುದಾಗಿದೆ.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು ಏಪ್ರಿಲ್ 9 ರಂದು ಸಭೆ ಸೇರುತ್ತಿದ್ದು, ದೇವಾಲಯ ಆವರಣಗಳನ್ನು ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ಕರಾಟೆ ಕಲಿಕೆ ಮತ್ತಿತರ ಸ್ವಯಂ ರಕ್ಷಣೆ ಮತ್ತು ಸಂಗೀತದ ತರಗತಿಗಳಿಗೆ ಬಳಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ 34 ಸಾವಿರ ದೇವಾಲಯಗಳಿವೆ. ಈ ಪೈಕಿ 175 ದೇವಾಲಯಗಳನ್ನು ಎ ದರ್ಜೆ ( ವಾರ್ಷಿಕ ಆದಾಯ 25 ಲಕ್ಷಕ್ಕಿಂತ ಹೆಚ್ಚಿರುವ ದೇವಾಲಯಗಳು) 158 ದೇವಾಲಯಗಳನ್ನು ಬಿ ದರ್ಜೆ ( ವಾರ್ಷಿಕ ಆದಾಯ 5-25 ಲಕ್ಷ) ಮತ್ತು ಉಳಿದ ದೇವಾಲಯಗಳನ್ನು ಸಿ ದರ್ಜೆ( 5 ಲಕ್ಷಕ್ಕಿಂತ ಕಡಿಮೆ ಆದಾಯ ) ದೇವಾಲಯಗಳೆಂದು ವರ್ಗೀಕರಿಸಲಾಗಿದೆ. ಇದಲ್ಲದೇ, ಸಾವಿರಾರು ದೇವಾಲಯಗಳು ಖಾಸಗಿ ಟ್ರಸ್ಟ್, ಸಂಘ ಸಂಸ್ಥೆಗಳ ಅಧೀನದಲ್ಲಿ ಇವೆ.

ಇದೇ ರೀತಿಯ ‘ದೇವಾಲಯಗಳಲ್ಲಿ ಆತ್ಮಸ್ಥೈರ್ಯ’ ಕಾರ್ಯಕ್ರಮವನ್ನು ಕೆಲ ದಿನಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಆದರೆ, ಕೋವಿಡ್ ಮತ್ತು ಲಾಕ್ ಡೌನ್ ಕಾರಣದಿಂದ ಮುಂದುವರೆಯಲು ಆಗಿರಲಿಲ್ಲ. ಇದೀಗ ಮತ್ತೆ ಪ್ರಸ್ತಾಪ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಕಾರ್ಯಕ್ರಮ ಆರಂಭಿಸಲು ಆರ್ಥಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ದೇವಾಲಯಗಳನ್ನು ನೋಡುತ್ತೇವೆ. ತರಗತಿ ನಡೆಸಲು ಎನ್‌ಜಿಒಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು, ಇದು ಸಂಜೆ ನಡೆಯುವುದರಿಂದ ಶಾಲಾ- ಕಾಲೇಜುಗಳಲ್ಲಿನ ನಿಯಮಿತ ತರಗತಿಗಳಿಗೆ ಅಡ್ಡಿಯಾಗುವುದಿಲ್ಲ, ಸರ್ಕಾರದ ಬಳಿ ಹಣ ಕಡಿಮೆ ಇದ್ದು, ಸಿಎಆರ್ ಅನುಧಾನಕ್ಕಾಗಿ ಖಾಸಗಿ ಕಂಪನಿಗಳನ್ನು ಕೋರುವ ಸಾಧ್ಯತೆಯಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *