ನಿಮ್ಮ ಮೌನ ಸಾಕು ಪ್ರಧಾನಿಗಳೇ, ದೇಶವಿಡೀ ಉತ್ತರ ಬಯಸುತ್ತಿದೆ: ರಾಹುಲ್ ಗಾಂಧಿ
ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಉತ್ತರ ಪ್ರದೇಶದ ಉನ್ನಾವ್ ಮತ್ತು ಜಮ್ಮು ಕಾಶ್ಮೀರದ ಕಠುವಾ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಾಣ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟುವಾಗಿ ಆರೋಪಿಸಿ ಖಂಡಿಸಿದ್ದಾರೆ.
“ಮಾನ್ಯ ಪ್ರಧಾನಿಗಳೇ, ನಿಮ್ಮ ಮೌನವನ್ನು ನಾವು ಒಪ್ಪುವುದಿಲ್ಲ. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ನೀವು ಏನು ಹೇಳುತ್ತೀರಿ ? ರಾಜ್ಯ ಸರಕಾರಗಳು ಆತ್ಯಾಚಾರಿಗಳನ್ನು ಮತ್ತು ಕೊಲೆಗಡುಕರನ್ನು ಏಕೆ ರಕ್ಷಿಸುತ್ತಿದೆ ? ನಿಮ್ಮ ಉತ್ತರಕ್ಕಾಗಿ ಇಡಿಯ ದೇಶವೇ ಕಾಯುತ್ತಿದೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಕಠುವಾ ಮತ್ತು ಉನ್ನಾವ್ ಗ್ಯಾಂಗ್ ರೇಪ್ ಪ್ರಕರಣಗಳನ್ನು ಪ್ರತಿಭಟಿಸಿ ನಿನ್ನೆ ಮಧ್ಯರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ರಾಹುಲ್ ಗಾಂಧಿ ಮಧ್ಯರಾತ್ರಿಯ ಮೋಂಬತ್ತಿ ಮೆರವಣಿಗೆಯನ್ನು ನಡೆಸಿದ್ದರು.