ಕೊನೆಗೂ ಅತ್ಯಾಚಾರ ಪ್ರಕರಣಗಳ ಕುರಿತು ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ!
ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದು ಮಾತ್ರವಲ್ಲದೇ ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನೋರ್ವ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಬಳಿಕ ಆ ಬಾಲಕಿಯ ತಂದೆಯನ್ನು ಕೊಲ್ಲಲಾಗಿತ್ತು. ಈ ಪ್ರಕರಣಗಳ ಕುರಿತಾದಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದನ್ನು ಎಲ್ಲರೂ ಪ್ರಶ್ನಿಸುತ್ತಿದ್ದರು. ಕೊನೆಗೂ ಇದೀಗ ಪ್ರಧಾನಿ ಈ ಕುರಿತು ಮಾತನಾಡಿದ್ದಾರೆ.
ಹೊಸದಿಲ್ಲಿಯಲ್ಲಿ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಉದ್ಘಾಟನೆ ಮಾಡಿದ ನಂತರ ಭಾಷಣ ಮಾಡಿದರು. ಕಳೆದ ಎರಡು ದಿನಗಳಿಂದಲೂ ಚರ್ಚೆಯಾಗುತ್ತಿರುವ ಘಟನೆಗಳು ನಾಗರಿಕ ಸಮಾಜದ ಭಾಗವಾಗಿರುವುದಕ್ಕೆ ಸಾಧ್ಯವಿಲ್ಲ. ಈ ಘಟನೆಗಳಿಂದ ಒಂದು ರಾಷ್ಟ್ರವಾಗಿ, ಸಮಾಜವಾಗಿ ನಾವೆಲ್ಲ ತಲೆತಗ್ಗಿಸಬೇಕಾಗಿದೆ. ಯಾವುದೇ ಅಪರಾಧಿಗಳನ್ನು ಬಿಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಹೆಣ್ಣುಮಕ್ಕಳಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಅಂತಾ ಹೇಳಿದರು. ಹೆಣ್ಣು ಮಗಳೊಬ್ಬಳು ಮನೆಗೆ ತಡವಾಗಿ ಬಂದರೆ ಎಲ್ಲಿಗೆ ಹೋಗಿದೆ ಎಂದು ಕೇಳುತ್ತೇವೆ. ಮಗ ತಡರಾತ್ರಿ ಬಂದರೂ ಇದೇ ಪ್ರಶ್ನೆಯನ್ನು ಕೇಳಬೇಕು ಎಂದರು.