ನವಾಜ್ ಶರೀಫ್ ತಮ್ಮ ಜೀವಿತಾವಧಿವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ: ಪಾಕ್ ಸುಪ್ರೀಮ್ ಕೋರ್ಟ್!
ನ್ಯೂಸ್ ಕನ್ನಡ ವರದಿ-(13.04.18): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಇನ್ನು ತಮ್ಮ ಜೀವಿತಾವಧಿವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಇಲ್ಲಿನ ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಇದರ ಜತೆಗೆ ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್ಗೆ ನವಾಜ್ನ ಮುಖ್ಯಸ್ಥರಾಗಿರುವಂತೆಯೂ ಇಲ್ಲ ಎಂದು ಆದೇಶಿಸಿದೆ.
ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಮಾಜಿ ಪ್ರಧಾನಿ ಷರೀಫ್ ಕುಟುಂಬಸ್ಥರು ಹೂಡಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ 2017ರ ಜು.28ರಂದು ಷರೀಫ್ರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿ ಆದೇಶ ನೀಡಿತ್ತು. ಶುಕ್ರವಾರದ ಸುಪ್ರೀಂಕೋರ್ಟ್ ಆದೇಶದಿಂದಾಗಿ 3 ಬಾರಿ ಪಾಕ್ ಪ್ರಧಾನಿಯಾಗಿದ್ದ ನಾಯಕನ ರಾಜಕೀಯ ಜೀವನ ಮುಕ್ತಾಯವಾದಂತಾಗಿದೆ.
ಐವರು ಸದಸ್ಯರಿದ್ದ ನ್ಯಾಯಮೂರ್ತಿಗಳ ಪೀಠ ನೀಡಿದ ತೀರ್ಪಿನಲ್ಲಿ ಪಾಕಿಸ್ತಾನದ ಸಂವಿಧಾನ ಪ್ರಕಾರ ಒಂದು ಬಾರಿ ಅನರ್ಹತೆಗೆ ಒಳಗಾದ ನಾಯಕ ಮತ್ತೂಮ್ಮೆ ಸಾರ್ವಜನಿಕ ಜೀವನದಲ್ಲಿ ಯಾವುದೇ ಹುದ್ದೆ ವಹಿಸಿಕೊಳ್ಳುವಂತಿಲ್ಲವೆಂದು ತಿಳಿಸಲಾಗಿದೆ. ಫೆ.17ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.