ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಅಭ್ಯರ್ಥಿ ಪಕ್ಷೇತರರಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಸೋಲು ಖಚಿತ! ಏಕೆ ಗೊತ್ತೇ?
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿಯೂ ಹಲವಾರು ಎಚ್ಚರಿಕೆಯ ರಾಜಕೀಯ ನಡೆ, ಜಾತಿ ಲೆಕ್ಕಾಚಾರದ ಮೂಲಕ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಕಸರತ್ತು ಮುಂದುವರೆದಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇನ್ನೇನು ಹೊರಬೀಳಬೇಕು ಎನ್ನುವಷ್ಟರಲ್ಲೇ ಪಕ್ಷದಲ್ಲಿ ಬಂಡಾಯದ ಬಾವುಟ ಎದ್ದುಕೊಂಡಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ನಾಯಕ ಹಾಗೂ ಜಿಎಸ್ ಬಿ ಸಮಾಜದ ಪ್ರಬಲ ಮುಖಂಡ ಬಿಜೆಪಿ ಸಿದ್ಧಾಂತದೊಂದಿಗೇ ಮುಂದುವರಿಯುತ್ತೇನೆಂದು ಮಂಗಳೂರಿನಲ್ಲಿ ಚುನಾವಣಾ ಕಣಕ್ಕಿಳಿಯಲು ಅಣಿಯಾಗಿದ್ದಾರೆ.
4 ವರ್ಷಗಳ ಹಿಂದೆ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಶ್ರೀಕರ ಪ್ರಭು ಕೂಡಾ ಈ ಬಾರಿ ಚುನಾವಣಾ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಪಕ್ಷ ಸಂಘಟನೆಯಲ್ಲಿ 33 ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಶ್ರೀಕರ ಪ್ರಭು ಕಳೆದ 2014ರ ಲೋಕಸಭೆ ಚುನಾವಣೆ ಸಂದರ್ಭ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. ಬಿಜೆಪಿಯ ಈ ಕ್ರಮದಿಂದ ಬೇಸತ್ತಿದ್ದ ಪ್ರಭು ಇದೀಗ ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ಹೋರಾಟಕ್ಕೆ ಸಜ್ಜಾಗಿದ್ದಾರೆ. ತನ್ನನ್ನು ಕಡೆಗಣಿಸಿದ ಬಿಜೆಪಿ ನಾಯಕರಿಗೆ ತಕ್ಕ ಶಾಸ್ತಿ ಮಾಡುವ ಉದ್ದೇಶದೊಂದಿಗೆ ಕಣಕ್ಕಿಳಿದಿರುವ ಪ್ರಭು, ಚುನಾವಣಾ ಕಚೇರಿಯನ್ನೂ ಪ್ರಾರಂಭಿಸಿದ್ದಾರೆ.
ಈ ಹಿಂದೆ ಬಿಜೆಪಿ ಕಾರ್ಯದರ್ಶಿಯಾಗಿದ್ದ ಶ್ರೀಕರ್ ಪ್ರಭು ಪರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಯುವಕರ ಬೆಂಬಲವಿರೋದ್ರಿಂದ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗುವ ಸಾಧ್ಯತೆಗಳಿವೆ. ಇನ್ನು ಮಂಗಳೂರು ಕ್ಷೇತ್ರದಲ್ಲಿ 10,000ಕ್ಕೂ ಹೆಚ್ವು ಮತದಾರರನ್ಬು ಹೊಂದಿರುವ ಜಿಎಸ್ ಬಿ ಸಮುದಾಯ ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್. ಆದರೆ, ಈ ಬಾರಿ ಜಿಎಸ್ ಬಿ ಸಮುದಾಯ ಪ್ರಬಲ ಮುಖಂಡರೊಬ್ಬರು ಬಿಜೆಪಿಯಿಂದ ಸಿಡಿದು ಪಕ್ಷೇತರನಾಗಿ ಕಣಕ್ಕಿಳಿಯುತ್ತಿರುವುದು ಬಿಜೆಪಿಗಂತೂ ಪ್ರಶ್ನೆಯಾಗಿ ಮೂಡಿದೆ.
ಯೊಗೀಶ್ ಭಟ್ ನಾಲ್ಕು ಬಾರಿ ಸತತವಾಗಿ ಗೆದ್ದಂತಹ ಕ್ಷೇತ್ರದಲ್ಲಿ ಕೆಳೆದ ಬಾರಿ ಕಾಂಗ್ರೆಸ್ ಪಕ್ಷದ ಲೋಬೊ ಜಯಗಳಿಸಿದ್ದರು. ಈ ಬಾರಿ ಹೇಗಾದರೂ ಮಾಡಿ ಮತ್ತೊಮ್ಮೆ ಗೆಲ್ಲಬೇಕೆಂದು ಬಿಜೆಪಿ ಜಿಎಸ್ ಬಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲು ತಯಾರಾದರೂ ಪಕ್ಷೇತರರಾಗಿ ಶ್ರೀಕರ ಪ್ರಭು ಸ್ಪರ್ಧೆ ಖಂಡಿತಾ ಅವರಿಗೆ ಮುಳುವಾಗಲಿದೆ ಎನ್ನಲಾಗಿದೆ.