ಆಸಿಫಾಳನ್ನು ಕೊಂದದ್ದು ಉತ್ತಮ ಕಾರ್ಯವೆಂದು ಕಮೆಂಟ್ ಮಾಡಿದ ವ್ಯಕ್ತಿಯನ್ನು ಕೆಲಸದಿಂದ ವಜಾ ಮಾಡಿದ ಬ್ಯಾಂಕ್!

ನ್ಯೂಸ್ ಕನ್ನಡ ವರದಿ(14-04-3018): ಸಣ್ಣ ವಯಸ್ಸಿನಲ್ಲೇ ಆಕೆ ಕೊಲ್ಲಲ್ಪಟ್ಟಿದ್ದು ಒಳ್ಳೆಯದಾಯಿತು, ಇಲ್ಲದಿದ್ದಲ್ಲಿ ಆಕೆ ದೊಡ್ಡವಳಾಗಿ ಭಾರತದ ಮೇಲೆ ಬಾಂಬ್ ಎಸೆಯುತ್ತಿದ್ದಳು ಎಂದು ತನ್ನ ಫೇಸ್ ಬುಕ್ ಪೇಜಿನಲ್ಲಿ ಬರೆದ ಕೋಟಕ್ ಮಹೀಂದ್ರ ಬ್ಯಾಂಕ್ ಕೊಚ್ಚಿ ಶಾಖೆಯ ಸಹಾಯಕ ಮ್ಯಾನೇಜರ್ ವಿಷ್ಣು ನಂದಕುಮಾರ್ ಎಂಬವನನ್ನು ಬ್ಯಾಂಕ್ ಕೆಲಸದಿಂದ ವಜಾ ಮಾಡಿದೆ.

ಜಮ್ಮುವಿನ ಕಥುವಾದಲ್ಲಿ ನಡೆದ 8ರ ಹರೆಯದ ಆಸಿಫಾ ಎಂಬ ಬಾಲಕಿಯನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿದ ದುಷ್ಕ್ರತ್ಯವನ್ನು ಸಮರ್ಥಿಸಿದ ಬ್ಯಾಂಕ್ ಮ್ಯಾನೇಜರನನ್ನು ಕೆಲಸದಿಂದ ವಜಾಮಾಡಬೇಕೆಂದು ಆಗ್ರಹಿಸಿ ಜನರು ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಮುಂದೆ ಬ್ಯಾಂಕ್ ಗೆ ಬಂದೊದಗಬಹುದಾದ ಅಪಾಯದ ಮುನ್ಸೂಚನೆಯನ್ನು ಅರಿತ ಕೋಟಕ್ ಮಹೀಂದ್ರ ಬ್ಯಾಂಕ್ ಆಡಳಿತವು ತಕ್ಷಣ ವಿಷ್ಣು ನಂದ ಕುಮಾರನನ್ನು ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಿದೆ.

ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ #dismiss_your_manager_trending ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ನಂದ ಕುಮಾರನ ವಜಾಕ್ಕೆ ವ್ಯಾಪಕ ಒತ್ತಾಯಗಳು ಕೇಳಿಬಂದಿದ್ದವು. ನಂತರ ನಂದಕುಮಾರನ ಪರವಾಗಿ ಕೋಟಕ್ ಮಹೀಂದ್ರ ಬ್ಯಾಂಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಆತನನ್ನು ಕೆಲಸದಿಂದ ವಜಾ ಗೊಳಿಸಿತ್ತು. ಜನರ ವ್ಯಾಪಕ ಆಕ್ರೋಶದ ನಂತರ ನಂದಕುಮಾರ್ ತಾನು ಬರೆದ ಬರಹವನ್ನು ಫೇಸ್ ಬುಕ್ ನಿಂದ ತೆಗೆದು ಹಾಕಿದ್ದ. ಆದರೆ ಆ ವೇಳೆಗಾಗಲೇ ಅದು ವೈರಲಾಗಿ ಆತನ ಕೆಲಸಕ್ಕೆ ಕುತ್ತು ತಂದಿತ್ತು.

Leave a Reply

Your email address will not be published. Required fields are marked *