‘ಯಡಿಯೂರಪ್ಪರೊಂದಿಗೆ ನೀವು ಮಾತನಾಡಲ್ವಂತೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಈಶ್ವರಪ್ಪ ಕೊಟ್ಟ ಉತ್ತರ ಕೇಳಿ ಶಾಕ್ ಆದ ಪತ್ರಕರ್ತರು !

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್-ಜೆಡಿಸ್ ನಾಯಕರ ವಿರುದ್ಧ ಒಂದಲ್ಲ ಒಂದು ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುತ್ತಲೇ ಬಂದವರು. ಇತ್ತೀಚೆಗೆ ತಮ್ಮ ನಾಯಕ ಯಡಿಯೂರಪ್ಪ ವಿರುದ್ಧವೇ ಬಿಜೆಪಿ ಹೈಕಮಾಂಡಿಗೆ ದೂರು ನೀಡುವ ಮೂಲಕ ಯಡಿಯೂರಪ್ಪರ ಗುಂಪಿನ ಕೆಂಗಣ್ಣಿಗೆ ಗುರಿಯಾಗಿರುವ ಮಧ್ಯೆ ಇಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ನೀವು- ಸಿಎಂ ಯಡಿಯೂರಪ್ಪ ಮಾತಾಡಲ್ವಂತೆ ಹೌದಾ? ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಹೌಹಾರುವಂತೆ ಉತ್ತರ ನೀಡಿದ್ದಾರೆ.

‘ನನಗಿರುವ ಮಾಹಿತಿ ಪ್ರಕಾರ ನೀವು ನಿಮ್ಮ‌ ಹೆಂಡತಿ, ಮಕ್ಕಳ‌ ಜತೆ ಮಾತನಾಡುತ್ತಿಲ್ವಂತೆ’ ಎಂದು ಪತ್ರಕರ್ತರನ್ನು ಉದ್ದೇಶಿಸಿ ಈಶ್ವರಪ್ಪ ತಿರುಗೇಟು ನೀಡಿದರು.

ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನೀವು ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ಮನೆಗೆ ಹೋಗುತ್ತೀರಿ, ಹೀಗಾಗಿ ಹೇಳಿದೆ ಅಷ್ಟೆ. ತಪ್ಪಾಗಿ ಅರ್ಥೈಸಬೇಡಿ ಮತ್ತೆ ತನ್ನ ಮಾತಿಗೆ ತೇಪೆಹಚ್ಚಲು ಮುಂದಾದರು.

ಯಡಿಯೂರಪ್ಪ ನಮ್ಮ ಸಿಎಂ. ಅವರೇ ನಮ್ಮ‌ ನಾಯಕ. ನನಗೂ ಯಡಿಯೂರಪ್ಪಗೆ ಆಗಲ್ಲ ಎಂದು ಬರೆದುಕೊಳ್ಳುವುದಿದ್ದರೆ ಬರೆದುಕೊಳ್ಳಿ, ನನ್ನದೇನು ಅಭ್ಯಂತರವಿಲ್ಲ. ಪೆನ್ನು ನಿಮ್ಮದು, ಪೇಪರ್ ನಿಮ್ಮದು ಎಂದು ತಮ್ಮ ಎಂದಿನ ಶೈಲಿಯಲ್ಲಿ ಗುಡುಗಿದರು.

ಅನುದಾನವನ್ನು ಹಂಚಿಕೆ ಸಂಬಂಧ ರಾಜ್ಯಪಾಲರು ಮತ್ತು ತಮ್ಮ‌ಪಕ್ಷದ ನಾಯಕರಿಗೆ ಪತ್ರ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಈಶ್ವರಪ್ಪ, ನಾನು ಯಾರಿಗೂ ದೂರು ಕೊಟ್ಟಿಲ್ಲ.

ಇಲಾಖೆಗೆ ಅನುದಾನ ಹಂಚಿಕೆ ಮಾಡುವುದು ಸಿಎಂ‌ ಕೆಲಸ. ಇಲಾಖೆಗೆ ಬಂದ ಹಣ ಹಂಚುವುದು ಸಚಿವರ ಕಾರ್ಯ ಎಂಬುದು ಕಾನೂನಿನಲ್ಲಿದೆ. ಇದನ್ನು ರಾಜ್ಯಪಾಲರ ಬಳಿ ಸ್ಪಷ್ಟನೆ ಕೇಳಿದ್ದಷ್ಟೆ, ಪಕ್ಷದ ವರಿಷ್ಠರು ಈ ವಿಷಯವನ್ನು ಬಗೆಹರಿಸುತ್ತೇವೆಂದು ಹೇಳಿದ್ದಾರೆ ಎಂದರು‌.

ನಾನು ಪತ್ರ ಬರೆದರೆ ದೂರು ಎಂದು ಏಕೆ ಪರಿಗಣಿಸುತ್ತೀರಿ, ನಾನು ನಮ್ಮ‌ಪಕ್ಷದ ನಾಯಕರ ಗಮನಕ್ಕೆ ತರದೇ ದೇವೇಗೌಡರು, ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆಯಬೇಕಿತ್ತೇ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *