ಮೇ 2 ರ ನಂತರ CM ಬದಲಾವಣೆ ಆಗೋದು ಗ್ಯಾರಂಟಿ; ಇನ್ನೂ ಸ್ವಲ್ಪ ದಿನಗಳಲ್ಲೇ ಅಪ್ಪ -ಮಗನ ನಿಜ ಬಣ್ಣ ಬಯಲಾಗಲಿದೆ: ಯಡಿಯೂರಪ್ಪ ವಿರುದ್ಧ ಮತ್ತೆ ಚಾಟಿ ಬೀಸಿದ ಯತ್ನಾಳ್
ಬೆಂಗಳೂರು: ಬಿಜೆಪಿ ಸರ್ಕಾರದ ಸಚಿವರು ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಾ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಾ ಬಂದಿರುವ ಬಿಜೆಪಿ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಮ್ಮೆ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.
ಮತ್ತೊಮ್ಮೆ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, ಈ ಬಾರಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದು ಗ್ಯಾರಂಟಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮೇ 2 ರ ನಂತರ ಯಡಿಯೂರಪ್ಪ ಬದಲಾವಣೆ ಆಗೋದು ಗ್ಯಾರಂಟಿ. ಮೇ 2ರ ನಂತರ ಯಾವ ಸಮಯದಲ್ಲಾದರೂ ಬದಲಾವಣೆ ಆಗುತ್ತಾರೆ. ಇದು ನಿಜ ಎಂದು ಭವಿಷ್ಯ ನುಡಿದಿದ್ದಾರೆ. ಪಕ್ಷ ಉಳಿಯಬೇಕು ಎಂದರೆ ಮೇ 2 ರ ನಂತರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲೇಬೇಕು. ಇಲ್ಲ ಅಂದರೆ ಪಕ್ಷ ಎಲ್ಲಿ ಉಳಿಯುತ್ರಿ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ.
ಇನ್ನೂ ಸ್ವಲ್ಪ ದಿನಗಳಲ್ಲೇ ಅಪ್ಪ -ಮಗನ ನಿಜ ಬಣ್ಣ ಬಯಲಾಗಲಿದೆ. ವಿಜಯೇಂದ್ರ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತೆ. ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯದವರು ಕರೆದುಕೊಂಡು ಹೋಗಿಲ್ಲ ಎಂದು ಹೇಳಲಿ. ನಾನು ಅವರಿಗೆ ಚಾಲೆಂಜ್ ಮಾಡ್ತೇನೆ. ಇದೇ ಡಿಕೆಶಿಯನ್ನು ಇಡಿಯವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರಲ್ಲ. ಅಲ್ಲಿಗೆ ವಿಜಯೇಂದ್ರರನ್ನು ಕರೆದುಕೊಂಡು ಹೋಗಿ ಇಡಿಯವರು ವಿಚಾರಣೆ ಮಾಡಿದ್ದಾರೆ. ಸೂಟು- ಬೂಟು ಹಾಕೊಂಡು ಹೋಗಿದ್ರು. ಅದೆನ್ನೆಲ್ಲಾ ಬಿಚ್ಚಿಸಿ, ಡಿಕೆಶಿ ತರನೇ ವಿಜಯೇಂದ್ರರನ್ನು ವಿಚಾರಣೆ ಮಾಡಿದ್ದಾರೆ. ಇದೆಲ್ಲೆವೂ ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ. ಅಪ್ಪ- ಮಗನ ನಿಜ ಬಣ್ಣ ಬಯಲಾಗಲಿದೆ ಎಂದು ಯತ್ನಾಳ್ ಗುಡುಗಿದರು. ಯಾರೋ ಒಬ್ಬರು ಚಿಲ್ಲರೆ ಪಲ್ಲರೆಗಳ ಕೈಯಲ್ಲಿ ಮಾತಡಿಸ್ತಾರೆ. ತಾಕತ್ತಿದ್ದರೆ ನನ್ನ ಬಗ್ಗೆ ಅಪ್ಪ – ಮಗ ಮಾತಾಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಬಿಎಸ್ವೈ ಹಾಗೂ ಪುತ್ರ ವಿಜಯೇಂದ್ರಗೆ ಸವಾಲು ಹಾಕಿದರು.
ಯಾರ ಯಾರ ನಾಯಕತ್ವ ಎಷ್ಟೆಷ್ಟು ಅನ್ನೋದು ಗೊತ್ತಾಗುತ್ತೆ. ಈಶ್ವರಪ್ಪ ಈಲ್ಡ್ ಆಗಿಲ್ಲ ಅನಿಸ್ತದೆ. ಈಶ್ವರಪ್ಪ ರಾಜ್ಯಪಾಲರ ಭೇಟಿ ಮಾಡಿದ್ದು ನನಗೇನೂ ಗೊತ್ತಿರಲಿಲ್ಲ ಎಂದರು. ಪಕ್ಷದ ಒಳಗೆ ಮಾತನಾಡುವಂತೆ ಯತ್ನಾಳ್ ಗೆ ಈಶ್ವರಪ್ಪ ಬುದ್ದಿ ಮಾತು ಹೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷದ ವೇದಿಕೆ ಅನ್ನೋದು ಏನು ರಾಜ್ಯಪಾಲರ ಕಚೇರಿಯಾ? ಎನ್ನುವ ಮೂಲಕ ಪರೋಕ್ಷವಾಗಿ ನೀವು ಪಕ್ಷ ವಿರೋಧಿಯಾಗಿ ನಡೆದುಕೊಂಡಿಲ್ವಾ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದರು.
ಇನ್ನೂ ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ. ಏಪ್ರಿಲ್ 17 ರ ನಂತರಶಾಸಕರು ಸಚಿವರು ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ. ಸೂರ್ಯ ಚಂದ್ರ ಇರುವವರೆಗೆ ಯಡಿಯೂರಪ್ಪನವರೇ ಸಿಎಂ ಅಂದ್ರೆ ಏನರ್ಥ?. ಯಡಿಯೂರಪ್ಪ ಫ್ಯಾಮಿಲಿಗೇನಾದರೂ ರಾಜ್ಯವನ್ನು ಬರೆದುಕೊಟ್ಟಿದ್ದಾರಾ..? ಪಕ್ಷದ ಸಿದ್ದಾಂತದ ಹಿನ್ನೆಲೆಯಲ್ಲಿ ಎರಡು ವರ್ಷ ಅವಕಾಶ ಕೊಟ್ಟಿದ್ದೇ ದೊಡ್ಡದ್ದು ಎಂದು ಹೇಳಿದರು.