ಮಾವೋವಾದಿಗಳಿಂದ ಅಪಹರಣಕ್ಕೊಳಗಾದ ಸಿಆರ್​ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಬಿಡುಗಡೆ

ರಾಯಪುರ: ಸಿಆರ್​ಪಿಎಫ್ ಮತ್ತು ಇತರ ಭದ್ರತಾ ಸಿಬ್ಬಂದಿ ಮೇಲೆ ಏಪ್ರಿಲ್3ರಂದು ನಕ್ಸಲರು ನಡೆಸಿದ ದಾಳಿಯಲ್ಲಿ ನಕ್ಸಲರು ಅಪಹರಣ ಮಾಡಿದ್ದ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ (Central Reserve Police Force – CRPF) ಕೋಬ್ರಾ ತುಕಡಿಯ ಯೋಧ ರಾಕೇಶ್ವರ್​ ಸಿಂಗ್ ಬಿಡುಗಡೆಯಾಗಿದ್ದಾರೆ. ಜೋನಾಗುಡದಲ್ಲಿ ನಡೆದ ದಾಳಿ ವೇಳೆ ನಕ್ಸಲರು ರಾಕೇಶ್ವರ್ ಸಿಂಗ್ ಅವರನ್ನು ಅಪಹರಿಸಿದ್ದರು. ಮಾವೋವಾದಿಗಳ ಕೈಯಿಂದ ಬಿಡುಗಡೆ ಆದ ನಂತರ ರಾಕೇಶ್ವರ್ ಅನ್ನು ಬಿಜಾಪುರ್ ಸಿಆರ್​ಪಿಎಫ್ ಶಿಬಿರಕ್ಕೆ ಕರೆತರಲಾಗಿದೆ

ನಕ್ಸಲರು ಮಂಗಳವಾರ (ಏಪ್ರಿಲ್ 6) ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಅಪಹೃತ ಸಿಆರ್​ಪಿಎಫ್ ಯೋಧನ ಬಿಡುಗಡೆಗಾಗಿ ಮಾತುಕತೆಗಾಗಿ ಮಧ್ಯವರ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ’ ಎಂದು ಹೇಳಿದ್ದರು. ಆದಾಗ್ಯೂ, ಸರ್ಕಾರ ಮಧ್ಯವರ್ತಿಗಳನ್ನು ಮಾತುಕತೆಗಾಗಿ ಬಿಟ್ಟಿತ್ತೇ ಎಂಬುದರ ಬಗ್ಗೆಯಾಗಲೀ, ನಕ್ಸಲರು ಯಾವ ರೀತಿಯ ಬೇಡಿಕೆ ಒಡ್ಡಿ ಸಿಂಗ್ ಅವರನ್ನು ಬಿಡುಗಡೆಗೊಳಿಸಿದ್ದಾರೆ ಎಂಬುದರ ಬಗ್ಗೆಯಾಗಲೀ ಸ್ಷಷ್ಟ ಮಾಹಿತಿ ಈವರೆಗೆ ಲಭಿಸಿಲ್ಲ.

ಇದು ನನ್ನ ಜೀವನದ ಅತೀ ಖುಷಿಯ ಕ್ಷಣ. ಈ ರೀತಿ ಹಿಂದಿರುಗಿ ಬಂದಿದ್ದಕ್ಕೆ ನಾನು ಆಭಾರಿ ಆಗಿರುತ್ತೇನೆ. ಸರ್ಕಾರಕ್ಕೆ ಧನ್ಯವಾದಗಳು. ಅವರು ಸುರಕ್ಷಿತವಾಗಿ ಬರುತ್ತಾರೆ ಎಂದು ನನಗೆ ಅಧಿಕೃತ ಸಂದೇಶ ಬಂದಿತ್ತು. ಅವರ ಆರೋಗ್ಯ ಚೆನ್ನಾಗಿದೆ ಎಂದು ರಾಕೇಶ್ವರ್ ಸಿಂಗ್ ಅವರ ಪತ್ನಿ ಮೀನು ಹೇಳಿದ್ದಾರೆ.

ರಾಕೇಶ್ವರ್ ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು ಎಂದು ಬಿಜಾಪುರ್ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ಶನಿವಾರ (ಏಪ್ರಿಲ್ 3) ಸಿಆರ್​ಪಿಎಫ್​ನ ಕೋಬ್ರಾ ಘಟಕ, ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆಯ ಸಿಬ್ಬಂದಿಯ ಮೇಲೆ ನಕ್ಸಲರು ಹೊಂಚುದಾಳಿ ನಡೆಸಿದ್ದರು. ಈ ವೇಳೆ ಸುಮಾರು ಐದು ತಾಸು ಗುಂಡಿನ ಚಕಮಕಿ ನಡೆದಿತ್ತು. ಭದ್ರತಾಪಡೆಗಳಿಗೆ ಸೇರಿದ 22 ಮಂದಿ ಹುತಾತ್ಮರಾಗಿದ್ದರು. ಈ ವೇಳೆ ಸುಮಾರು 20 ಮಾವೋವಾದಿಗಳನ್ನು ಕೊಲ್ಲಲಾಗಿದೆ ಎಂದು ಭದ್ರತಾ ಪಡೆಗಳ ಸಿಬ್ಬಂದಿ ಹೇಳಿದ್ದರು. ಆದರೆ ಈ ಹೇಳಿಕೆಯನ್ನು ನಿರಾಕರಿಸಿದ್ದ ನಕ್ಸಲರು ತಮ್ಮ ಪಾಳಯದಲ್ಲಿ ಕೇವಲ ನಾಲ್ವರು ಸತ್ತಿದ್ದಾರೆ ಎಂದು ಹೇಳಿದ್ದರು.

ಶೂಟ್​ಔಟ್​ ವೇಳೆ ಸಿಆರ್​ಪಿಎಫ್​ ತುಕಡಿಯಲ್ಲಿದ್ದ ಜಮ್ಮು ಮೂಲದ ರಾಕೇಶ್ವರ್ ಸಿಂಗ್ ಮಾನ್ಹಸ್ ನಂತರ ನಾಪತ್ತೆಯಾಗಿದ್ದರು. ಅವರನ್ನು ನಕ್ಸಲರು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು. ನಾಪತ್ತೆಯಾಗಿದ್ದ ಯೋಧನ ಚಿತ್ರ ಏಪ್ರಿಲ್ 7ರಂದು ಮುಂಜಾನೆ 11.27ಕ್ಕೆ ಸ್ಥಳೀಯ ಪತ್ರಕರ್ತರಿಗೆ ಸಿಕ್ಕಿದೆ. ಮಾವೋವಾದಿಗಳ ನಾಯಕ ವಿಕಲ್ಪ ಈ ಫೋಟೊ ಕಳಿಸಿದ್ದಾರೆ ಎಂದು ಸುಕ್ಮದ ಪತ್ರಕರ್ತ ರಾಜಾ ರಾಥೋಡ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *