ರಾಜ್ಯದ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಶನಿವಾರದಿಂದ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಜಾರಿ; ಯಾವೆಲ್ಲ ನಗರ…ಇಲ್ಲಿದೆ ಮಾಹಿತಿ

ಬೆಂಗಳೂರು: ದೇಶದಾದ್ಯಂತ ಕೊರೋನಾ ಎರಡನೇ ಅಲೆ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ನಿನ್ನೆ ಒಂದೇ ದಿನಕ್ಕೆ ದೇಶದಲ್ಲಿ 1.5 ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲೆನೋವಿಗೆ ಕಾರಣವಾಗಿದೆ. ಅಲ್ಲದೆ, ನೆರೆಯ ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕೈಮೀರಿದ್ದು, ಕರ್ನಾಟಕದಲ್ಲೂ ಸಹ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ.

ಆದರೆ, ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಇರುವ ಸ್ಥಿತಿಯಲ್ಲಿ ಮತ್ತೆ ಲಾಕ್​ಡೌನ್​ ಘೋಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಪರ್ಯಾಕ ಕ್ರಮ ಅನುಸರಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಶನಿವಾರದಿಂದ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿ ಇಂದು ಆದೇಶಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ, “ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನೇಕ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದು ಕೊರೋನಾ ನಿಯಂತ್ರಣಕ್ಕೆ ಪರ್ಯಾಯವಾದ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಸಲಹೆಯಂತೆ ರಾಜ್ಯದಲ್ಲಿ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಶನಿವಾರದಿಂದ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಲು ಆದೇಶಿಸಲಾಗಿದೆ.

ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ, ಬೀದರ್, ತುಮಕೂರು, ಉಡುಪಿ ನಗರ, ಮಣಿಪಾಲ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

ಈ ಜಿಲ್ಲೆಗಳ ಜನರಿಗೆ ನಾನು ಮನವಿ ಮಾಡುತ್ತಿದ್ದೇನೆ. ನಾವು ಈಗ ಲಾಕ್​ಡೌನ್ ಮಾಡ್ತಿಲ್ಲ, ಆದರೆ ಪರಿಸ್ಥಿತಿ ಕೈಮೀರಿದರೆ ಅದನ್ನೂ ಮಾಡಬೇಕಾಗುತ್ತದೆ. ಈಗ ಪ್ರಾಯೋಗಿಕವಾಗಿ 10 ಕಡೆ ಕೊರೊನಾ ಕರ್ಫ್ಯೂ ಜಾರಿ ಮಾಡ್ತಿದ್ದೇವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ನಿರ್ಬಂಧ ಹೆಚ್ಚಿಸಬೇಕಾಗುತ್ತದೆ. ಜನರು ಸಹಕರಿಸಿದರೆ ಬಹುಶಃ ಅಂಥ ಪರಿಸ್ಥಿತಿ ಬರುವುದಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಕೊಟ್ಟ ಸಲಹೆಯನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲೆಂದು ಜಾರಿ ಮಾಡಿರುವ ನಿರ್ಬಂಧಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕದವರಿಗೆ ಈಗ ₹ 250 ದಂಡ ವಿಧಿಸುತ್ತಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ರೂಪಿಸಿರುವ ಕ್ರಮಗಳನ್ನು ಬಿಗಿಯಾಗಿ ಜಾರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ಅಗತ್ಯ ಸೇವೆಗಳು ಇರುತ್ತವೆ. ಬಸ್​ಗಳ ಓಡಾಟಕ್ಕೂ ನಿರ್ಬಂಧ ಇರುವುದಿಲ್ಲ. ಆದರೆ ಜನರು ಓಡಾಡಬಾರದು. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದರ ಬಗ್ಗೆ ಎಚ್ಚರವಹಿಸಬೇಕು. ದೊಡ್ಡ ಪ್ರಮಾಣದಲ್ಲಿ ಸಭೆ-ಸಮಾರಂಭ ಮಾಡಬಾರದು ಎಂದು ಸಲಹೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತನಾಡುವಾಗ ಕರ್ನಾಟಕದ ಪರಿಸ್ಥಿತಿಯನ್ನು ಸವಿಸ್ತಾರವಾಗಿ ವಿವರಿಸಿದೆ. ಇಲ್ಲಿನ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟೆ. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ ಎಂದರು.

“ಪೂರ್ಣ ಪ್ರಮಾಣದ ಕರ್ಫ್ಯೂ ಆಗಬಾರದೆಂದರೆ ಸಾರ್ವಜನಿಕರು ಮಾಸ್ಕ್‌ ಅನ್ನು ಕಡ್ಡಾಯವಾಗಿ ಬಳಸಬೇಕು. ಮೊದಲು ಸೀಮಿತ ಜಿಲ್ಲೆಗಳಲ್ಲಿ ಮಾತ್ರ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು. ಒಂದು ವೇಳೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಸ್ ಸಂಚಾರ ಎಂದಿನಂತೆ ಇರಲಿದೆ‌. ಮದುವೆ ಮತ್ತಿತರ ಸಮಾರಂಭಗಳಿಗೆ‌ ನಿಯಮ ಪ್ರಕಾರ ಇರಬೇಕು. ಮಾಸ್ಕ್ ಹಾಕದಿದ್ದರೆ ದಂಡ ಕಡ್ಡಾಯ. ದೊಡ್ಡ ಪ್ರಮಾಣದಲ್ಲಿ ಸಭೆ ಸಮಾರಂಭ ಆಯೋಜನೆ ಮಾಡುವಂತಿಲ್ಲ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ನೈಟ್ ಕರ್ಫ್ಯೂ….
ನೈಟ್​ ಕರ್ಫ್ಯೂ ನಿಮಿತ್ತ ರಾತ್ರಿ ವೇಳೆ ರಸ್ತೆಯಲ್ಲಿ ಪೊಲೀಸರ ನಿಯೋಜನೆ ಇರಲಿದೆ. ಈ ಸಂಬಂಧ ನಾಳೆ ಎಲ್ಲಾ ಠಾಣೆಯ ಇನ್ಸ್ಪೆಕ್ಟರ್ ಗಳಿಗೂ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಂತೆ ಕಮಿಷನರ್ ಕಮಲ್​ಪಂತ್​ ಸೂಚನೆ ನೀಡಲಿದ್ದಾರೆ. ಮುಖ್ಯವಾಗಿ ಎಲ್ಲಾ ಫ್ಲೈಓವರ್ ಗಳನ್ನು ಬಂದ್ ಮಾಡಲಾಗುವುದು. ರಾತ್ರಿ 10 ರ ಬಳಿಕ ಓಡಾಟ ಮಾಡೋರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು. ರಾತ್ರಿ ಪಾಳಿಯಲ್ಲಿ ಹೊಯ್ಸಳ, ಬೀಟ್ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಇದಲ್ಲದೆ ಪೊಲೀಸರು ನಗರದ ಎಲ್ಲಾ ಮುಖ್ಯರಸ್ತೆಗಳನ್ನೂ ಬಂದ್ ಮಾಡಲಿದ್ದಾರೆ. ಕೊರೋನಾ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಕರ್ಫ್ಯೂ ಟೈಂನಲ್ಲಿ ಸುಖಾಸುಮ್ಮನೆ ಸುತ್ತಾಡಿದ್ರೆ ವಾಹನಗಳನ್ನು ಸೀಜ್ ಮಾಡುವ ಸಾಧ್ಯತೆಯೂ ಇದೆ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಜನರಿಗೆ ಕೊರೊನಾ ಪಿಡುಗು ಇನ್ನೂ ಹೋಗಿಲ್ಲ ಎನ್ನುವುದನ್ನು ನೆನಪಿಸುವ ಉದ್ದೇಶದಿಂದ ಕೊರೊನಾ ಕರ್ಫ್ಯೂ ಜಾರಿ ಮಾಡುತ್ತಿದ್ದೇವೆ. ಕೊರೊನಾ ರಾತ್ರಿಹೊತ್ತು ಮಾತ್ರ ಬರುತ್ತಾ? ಹಗಲು ಬರಲ್ವಾ ಎಂದು ಕೆಲವರು ಕೇಳುತ್ತಿರುತ್ತಾರೆ. ‘ಇದು ಜನರಿಗೆ ಎಚ್ಚರಿಕೆ ನೀಡುವ ಪ್ರಯತ್ನ’ ಎಂದು ಅಂಥವರಿಗೆ ಉತ್ತರಿಸುತ್ತೇನೆ. ರಾತ್ರಿ 10ರ ನಂತರ ಅನಗತ್ಯ ಓಡಾಟ ನಿರ್ಬಂಧಿಸುವುದು ನಮ್ಮ ಉದ್ದೇಶ. ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ. ಅಗತ್ಯ ಸೇವೆಗಳು ಎಂದಿನಂತೆ ಇರುತ್ತವೆ ಎಂದು ಹೇಳಿದರು.

Leave a Reply

Your email address will not be published. Required fields are marked *