ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, 100 ಸ್ಥಾನಗಳೊಂದಿಗೆ ಕಾಂಗ್ರೆಸ್ ಅತಿ ದೊಡ್ಡ ಪಕ್ಷ: ಇಂಡಿಯಾ ಟುಡೆ ಸಮೀಕ್ಷೆ!

ನ್ಯೂಸ್ ಕನ್ನಡ ವರದಿ(14-04-2018): ಮುಂದಿನ ತಿಂಗಳು ನಡೆಯುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ವಿಧಾನಸಭೆ ಸೃಷ್ಚಿಯಾಗಲಿದ್ದು, ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಇಂಡಿಯಾ ಟುಡೇ ಹಾಗೂ ಕಾರ್ವಿ ಇನ್ ಸೈಟ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.

224 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷವು 90 ರಿಂದ 101 ಸ್ಥಾನಗಳನ್ನು ಪಡೆಯುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆಯಾದರೂ ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷ ಹಿನ್ನಡೆಯನ್ನು ಅನುಭವಿಸಲಿದೆ. ಬಿಜೆಪಿಯು 78 ರಿಂದ 86 ಸ್ಥಾನಗಳನ್ನೂ, ಜೆಡಿಎಸ್ 34 ರಿಂದ 43 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮತ ಹಂಚಿಕೆ ಪ್ರಕಾರ ಹೇಳುವುದಾದರೆ ಕಾಂಗ್ರೆಸ್‌ ಶೇ.37ರಷ್ಟು ಮತಗಳನ್ನು ಗಳಿಸಲಿದೆ. ಬಿಜೆಪಿಗೆ ಶೇ.35 ರಷ್ಟು ಮತಗಳು ದಕ್ಕಲಿವೆ. ಜೆಡಿಎಸ್‌-ಬಿಎಸ್‌ಪಿ ಗೆ ಒಟ್ಟಾರೆಯಾಗಿ ಶೇ.19ರಷ್ಟು ಮತಗಳು ಪ್ರಾಪ್ತವಾಗಲಿವೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅತ್ಯಂತ ಹಳೆಯ ಕಾಂಗ್ರೆಸ್‌ ಪಕ್ಷಕ್ಕೆ ಜೆಡಿಎಸ್‌ ಬೆಂಬಲ ಕೊಡಬೇಕು ಎಂದು ಶೇ.39 ರಷ್ಟು ಜನ ಬಯಸಿದ್ದು, ಬಿಜೆಪಿಗೆ ಜೆಡಿಎಸ್‌ ಬೆಂಬಲ ಕೊಡಬೇಕು ಎಂದು ಶೇ.29ರಷ್ಟು ಮಂದಿ ಬಯಸುತ್ತಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ಸೈಟ್ಸ್‌ ಈ ಮತದಾನ ಪೂರ್ವ ಸಮೀಕ್ಷೆಗಾಗಿ ರಾಜ್ಯಾದ್ಯಂತದ 224 ವಿಧಾನಸಭಾ ಕ್ಷೇತ್ರಗಳ 27,919 ಮಂದಿಯನ್ನು ಸಂದರ್ಶಿಸಿದೆ.

Leave a Reply

Your email address will not be published. Required fields are marked *