ಮಾನ ಹಾನಿ ಆರೋಪ: ಯಡಿಯೂರಪ್ಪ, ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಾ ಕುಳಾಯಿ ದೂರು!
ನ್ಯೂಸ್ ಕನ್ನಡ ವರದಿ(14-04-2018): ಬಿಜೆಪಿ ಪಕ್ಷದ ಮುಖಂಡರು ತನ್ನ ಭಾವ ಚಿತ್ರ ಬಳಸಿ ಮಾನ ಹಾನಿ ಮಾಡಿದ್ದಾರೆಂದು ಆರೋಪಿಸಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಪ್ರತಿಭಾ ಕುಳಾಯಿ ದೂರು ನೀಡಿದ್ದಾರೆ.
ಮಂಗಳೂರು ಜೆಎಮ್ಎಫ್ಸಿ ನ್ಯಾಯಾಲಯದಲ್ಲಿ ಈ ಕುರಿತು ದೂರು ದಾಖಲಿಸಿದ ಪ್ರತಿಭಾ ಕುಳಾಯಿ, ಬಿಜೆಪಿ ಚಾರ್ಜ್ ಶೀಟ್ ನಲ್ಲಿ ನನ್ನ ಫೋಟೋ ಬಳಸುವ ಮೂಲಕ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭ ಕರಂದ್ಲಾಜೆ ಸೇರಿದಂತೆ ಐವರು ನನ್ನ ಮಾನಹಾನಿ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.
ದೂರು ಸ್ವೀಕರಿಸಿದ ಮಂಗಳೂರು ಜೆಎಮ್ಎಫ್ಸಿ ಎರಡನೇ ನ್ಯಾಯಾಲಯವು ಎಪ್ರಿಲ್ 19ರಂದು ದೂರಿನ ವಿಚಾರಣೆಯನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.