ಕುರಾನ್​ನಲ್ಲಿನ ಕೆಲವು ಆಯತ್​ಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ; ಅರ್ಜಿದಾರ ವಾಸಿಂ ರಿಜ್ವಿಗೆ 50 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್

ದೆಹಲಿ: ಮುಸ್ಲಿಂಮರ ಪವಿತ್ರ ಧಾರ್ಮಿಕ ಗ್ರಂಥ ಕುರಾನ್​ನಲ್ಲಿನ ಕೆಲವು ಭಾಗಗಳು ದೇಶದ ಕಾನೂನಿಗೆ ವಿರುದ್ಧವಾಗಿವೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನಡೆಸುತ್ತವೆ, ಆಯತ್​ಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ಅಲ್ಲದೇ ಪಿಐಎಲ್ ಸಲ್ಲಿಸಿದ್ದ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಂ ರಿಜ್ವಿಗೆ 50 ಸಾವಿರ ದಂಡವನ್ನು ಸಹ ಸುಪ್ರೀಂಕೋರ್ಟ್ ವಿಧಿಸಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಫಾಲಿ ನಾರೀಮನ್, ಬಿ ಆರ್, ಗವೈ ಹೃಷಿಕೇಶ್ ರಾಯ್ ಅವರುಗಳಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

ಕುರಾನ್​ನಲ್ಲಿನ ಕೆಲವು ಆಯತ್​ಗಳು ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತವೆ ಎಂದು ವಾಸೀಂ ರಿಜ್ವಿ ದೂರಿದ್ದರು. ಅಲ್ಲದೇ ಅಂತಹ ಭಾಗಗಳನ್ನು ಅಸಾಂವಿಧಾನಿಕ, ಪರಿಣಾಮಕಾರಿಯಲ್ಲದ, ಯಾವುದೇ ಕಾರ್ಯನಿರ್ವಹಿಸಿದ ಭಾಗಗಳೆಂದು ಘೋಷಿಸಲು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಉತ್ತರ ಪ್ರದೇಶದ ಕೇಂದ್ರೀಯ ವಕ್ಫ್ ಬೋರ್ಡ್​ನ ಮಾಜಿ ಅಧ್ಯಕ್ಷ, ಆಲ್ ಇಂಡಿಯಾ ಶಿಯಾ ಯತೀಮ್ ಖಾನಾದ ಅಧ್ಯಕ್ಷರೂ ಆಗಿರುವ ವಾಸಿಂ ರಿಜ್ವಿ ಕೆಲವು ದಿನಗಳ ಹಿಂದೆಯೇ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಅವರ ವಿರುದ್ಧ ಕೋಪಗೊಂಡಿದ್ದ ಕೆಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಎಫ್ಐಆರ್ ಸಹ ದಾಖಲಿಸಿದ್ದವು. ಅಲ್ಲಾಹುವಿನ ಪವಿತ್ರ ಸಂದೇಶಗಳ ಗ್ರಂಥರೂಪ ಬರೆಯಲ್ಪಟ್ಟಿದ್ದ ಪವಿತ್ರ ಕುರಾನ್ನಲ್ಲಿ ಕೆಲವು ನಕಾರಾತ್ಮಕ ಮತ್ತು ದ್ವೇಷಪೂರಿತ ಅಂಶಗಳಿವೆ ಎಂದು ಅವರು ಅರ್ಜಿಯಲ್ಲಿ ದೂರಿದ್ದರು.

ಇದೀಗ ಈ ಆದೇಶದ ಮೂಲಕ ಸುಪ್ರೀಂಕೋರ್ಟ್ ಕುರಾನ್​ ವಿರುದ್ಧದ ಅರ್ಜಿಯನ್ನು ತಳ್ಳಿಹಾಕಿದಂತಾಗಿದೆ. ಉತ್ತರ ಪ್ರದೇಶದ ಕೇಂದ್ರೀಯ ವಕ್ಫ್ ಬೋರ್ಡ್​ನ ಮಾಜಿ ಅಧ್ಯಕ್ಷ, ವಾಸಿಂ ರಿಜ್ವಿ ಅವರ ಅರ್ಜಿಯನ್ನು ವಜಾಗೊಳಿಸಿ, ಅವರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಈ ಪ್ರಕರಣದ ಕುರಿತು ದೇಶದ ಮುಸ್ಲಿಂ ಸಮುದಾಯ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *