ಸಿರಿಯಾದ ವಿರುದ್ಧ ನಡೆಸಿದ ದಾಳಿಯ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ: ಎಚ್ಚರಿಕೆ ನೀಡಿದ ರಷ್ಯಾ!
ನ್ಯೂಸ್ ಕನ್ನಡ ವರದಿ-(14.04.18): ಸಿರಿಯಾ ಈಗ ಅಕ್ಷರಶಃ ರಣಭೂಮಿಯಾಗಿ ಮಾರ್ಪಟ್ಟಿದೆ. ಅಮೇರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಈಗಾಗಲೇ ಜಂಟಿಯಾಗಿ ಯುದ್ಧವನ್ನು ಆರಮಬಿಸಿದೆ. ನೂರಕ್ಕೂ ಹೆಚ್ಚಿನ ಕ್ಷಿಪಣಿಗಳನ್ನು ಸಿರಿಯಾಕ್ಕೆ ಗುರಿಯಾಗಿಸಿದೆ. ಇದೀಗ ಅಮೆರಿಕಾ, ಫ್ರಾನ್ಸ್ ಹಾಗೂ ಬ್ರಿಟನ್ ಸಸೇನೆಗಳು ನಡೆಸುತ್ತಿರುವ ಈ ಸೇನಾ ಕಾರ್ಯಾಚರಣೆಯನ್ನು ವಿರೋಧಿಸಿರುವ ರಷ್ಯಾ, ಈ ಕಾರ್ಯಾಚರಣೆಗಳ ಪರಿಣಾಮವನ್ನು ನೀವು ಮುಂದೆ ಎದುರಿಸಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಟ್ವಿಟ್ಟರ್ ಖಾತೆಯ ಮೂಲಕ ತನ್ನ ಹೇಳಿಕೆಯನ್ನು ನೀಡಿದ ಅಮೆರಿಕಾದಲ್ಲಿರುವ ರಷ್ಯಾ ರಾಯಭಾರಿ ಕಚೇರಿ, ಪೂರ್ವಯೋಜಿತ ಸನ್ನಿವೇಶ ಸೃಷ್ಟಿಸುವ ಪ್ರಯತ್ನ ಜಾರಿಯಲ್ಲಿದೆ. ಮತ್ತೆ, ನಮ್ಮನ್ನು ಕೆಣಕಲಾಗುತ್ತಿದೆ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾವು ಈಗಾಗಲೇ ಎಚ್ಚರಿಸಿದ್ದೇವೆ’ ಎಂದಿದ್ದಾರೆ. ‘ಈ ಕಾರ್ಯಾಚರಣೆಯಿಂದ ವಾಷಿಂಗ್ಟನ್, ಲಂಡನ್ ಮತ್ತು ಪ್ಯಾರೀಸ್ನೊಂದಿಗಿನ ಸಂಬಂಧಗಳು ಹದಗೆಡಲಿವೆ. ರಾಸಾಯನಿಕ ಶಸ್ತ್ರಾಸ್ತ್ರಗಳ ದೊಡ್ಡ ಮಾಲೀಕನಾದ ಅಮೆರಿಕ ಇದಕ್ಕೆ ಬೇರೆ ದೇಶಗಳನ್ನು ದೂಷಿಸುವ ನೈತಿಕತೆ ಹೊಂದಿಲ್ಲ’ ಎಂಬ ಕಟುವಾದ ಸಾಲುಗಳನ್ನು ಅವರು ಉಲ್ಲೇಖಿಸಿದ್ದಾರೆ.