ತೊಗಾಡಿಯಾಗೆ ಭಾರೀ ಹಿನ್ನಡೆ: ವಿಹೆಚ್ ಪಿ ಅಧ್ಯಕ್ಷರಾಗಿ ವಿ.ಎಸ್.ಕೋಕ್ಜೆ ಆಯ್ಕೆ!
ನ್ಯೂಸ್ ಕನ್ನಡ ವರದಿ(15-04-2018): ಕಳೆದ ಐದು ದಶಕಗಳ ವಿಶ್ವ ಹಿಂದೂ ಪರಿಷತ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂದೂ ಫೈರ್ ಬ್ರಾಂಡ್ ಪ್ರವೀಣ್ ತೋಗಾಡಿಯಾ ಅವರನ್ನು ಸೋಲಿಸುವ ಮೂಲಕ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಹಾಗೂ ಮಧ್ಯ ಪ್ರದೇಶ ಹೈಕೋರ್ಟಿನ ನಿವೃತ ನ್ಯಾಯಾಧೀಶ ವಿಷ್ಣು ಸದಾಶಿವ ಕೋಕ್ಜೆ ಆಯ್ಕೆಯಾಗಿದ್ದಾರೆ.
ಚಲಾವಣೆಯಾದ ಒಟ್ಟು 192 ಸದಸ್ಯರ ಮತಗಳ ಪೈಕಿ ವಿಎಸ್.ಕೋಕ್ಜೆ 131 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ರಾಘವ್ ರೆಡ್ಡಿ ಅವರು 60 ಮತಗಳನ್ನು ಪಡೆದರು. ವಿಹೆಚ್ ಪಿ ನಾಯಕರ ಧೋರಣೆಯಿಂದ ಅಸಮಾಧಾನಗೊಂಡು ಪ್ರನೀಣ್ ತೊಗಾಡಿಯಾ ಈ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ಗುರ್ಗಾಂವ್ ನ ವಿಹೆಚ್ ಪಿ ಕಚೇರಿಯಲ್ಲಿ ಅಧ್ಯಕ್ಷರ ಚುನಾವಣೆಯು ನಡೆಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ಕೋಕ್ಜೆಯವರಿಗೆ ಹಿಂದುತ್ವದ ಕುರಿತು ಏನೂ ಅರಿವಿಲ್ಲ ಎಂದು ಟೀಕಿಸಿದ ತೊಗಾಡಿಯಾ, ನಾನು ರಾಮಮಂದಿರ ನಿರ್ಮಾಣ ಹಾಗೂ ಗೋರಕ್ಷಣೆಯ ವಿಷಯದಲ್ಲಿ ಕೇಂದ್ರ ಸರಕಾರದ ವಿಫಲತೆಯನ್ವು ಖಂಡಿಸಿ ಎಪ್ರಿಲ್ 17ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ.