ಆ ಢೋಂಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ!: ದಿನೇಶ್ ಗುಂಡೂರಾವ್
ನ್ಯೂಸ್ ಕನ್ನಡ ವರದಿ: ಉನ್ನಾವೊ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳು ರಾಷ್ಟ್ರಾದ್ಯಂತ ಭಾರೀ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದೇಶಾದ್ಯಂತ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತಿದ್ದು, ಉನ್ನಾವ್ನಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಗೆ ಚಪ್ಪಲಿಯಲ್ಲಿ ಹೊಡಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಿನೇಶ್ ಗುಂಡೂರಾವ್ ಈ ರೀತಿಯ ಹೇಳಿಕೆ ನೀಡಿದ್ದಾರೆ.. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಅವರ ಶಾಸಕನೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೂ ಕೂಡ ಯೋಗಿ ಆದಿತ್ಯನಾಥ್ ಕ್ರಮ ಜರುಗಿಸಿರಲಿಲ್ಲ. ಹೀಗಾಗಿ, ಯೋಗಿ ಆದಿತ್ಯ ನಾಥ್ ಒಬ್ಬ ಢೋಂಗಿ ಭೋಗಿ ನಾಥ್ ಆಗಿದ್ದು, ಅವನು ಸಿಎಂ ಸ್ಥಾನದಲ್ಲಿ ಮುಂದುವರೆಯುದುದಕ್ಕೆ ನಾಲಾಯಕ್ ಆಗಿದ್ದಾನೆ. ಅವನನ್ನು ಕೂಡಲೇ ಪ್ರಧಾನಿ ನರೇಂದ್ರ ಮೋದಿ ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಯೋಗಿ ಆದಿತ್ಯಾನಾಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಅವನು ಕರ್ನಾಟಕಕ್ಕೆ ಬರುವುದರಿಂದ ನಾಡಿಗೆ ಅಪಮಾನವಾಗಲಿದ್ದು, ಅವನು ಮತ್ತೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.