ಗುಜರಾತ್: ಉನ್ನಾವ್,ಕಥುವಾ ಪ್ರಕರಣದ ಬೆನ್ನಲ್ಲೇ 9 ವರ್ಷದ ಬಾಲಕಿಯ ಶವ ಪತ್ತೆ!

ನ್ಯೂಸ್ ಕನ್ನಡ ವರದಿ(15-04-2018): ಉತ್ತರ ಪ್ರದೇಶದ ಉನ್ನಾವ್ ಹಾಗೂ ಜಮ್ಮವಿನ ಕಥುವಾ ಪ್ರಕರಣಗಳಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಗುಜರಾತಿನ ಸೂರತ್ ನಲ್ಲಿ 9 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಬಾಲಕಿ ದೇಹದ ಮೇಲೆ ಬರೊಬ್ಬರಿ 86 ಗಾಯದ ಗುರುತುಗಳಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಬಾಲಕಿಯನ್ನು ಕೊಲ್ಲುವುದಕ್ಕೂ ಒಂದು ಮುಂಚಿತವಾಗಿ ಆಕೆಯ ಮೇಲೆ ದೈಹಿಕ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಅಲ್ಲದೆ ಬಾಲಕಿಯ ಗುಪ್ತಾಂಗಳಿಗೂ ಗಂಭೀರ ಗಾಯಗಳಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿವಿಲ್ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಗಣೇಶ್ ಗೊವೇಕರ್ ಅವರು, ಬಾಲಕಿಯ ದೇಹದಲ್ಲಿ ಸುಮಾರು 86 ಗಾಯಗಳು ಪತ್ತೆಯಾಗಿದ್ದು, ಬಹುತೇಕ ಗಾಯಗಳು ಒಂದು ವಾರದ ಹಳೆಯ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.ಬಾಲಕಿಯ ಗುರುತು ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *