ನೀತಿ ಸಂಹಿತೆ ಬಿಸಿ: ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ದಾಳಿ ಮಾಡಿ ಅಧಿಕಾರಿಗಳು ಮಾಡಿದ್ದೇನು ಗೊತ್ತೇ?
ಮಂಗಳೂರು, ಎಪ್ರಿಲ್.15: ಚುನಾವಣ ನೀತಿ ಸಂಹಿತೆಯ ಬಿಸಿ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೂ ತಟ್ಟಿದ್ದು, ನಿಶ್ಚಿತಾರ್ಥ ನಡೆಯುತ್ತಿದ್ದ ಮನೆಯ ಮಾಲಿಕ ಜೈಲು ಪಾಲಾದ ಅಪರೂಪದ ಘಟನೆಯೊಂದು ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ವಿವಾಹ ನಿಶ್ಚಿತಾರ್ಥ ಸಂದರ್ಭ ಮನೆಯಲ್ಲಿ ಏರ್ಪಡಿಸಲಾದ ಭೋಜನ ಕೂಟಕ್ಕೆ ಮದ್ಯ ಶೇಖರಣೆ ಮಾಡಿರುವ ಆರೋಪದಲ್ಲಿ ಮನೆ ಮಾಲಿಕ ಇರಾ ಗ್ರಾಮದ ಸ್ಟೀವನ್ ಡಿ’ಸಿಲ್ವ ಅವರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಮಧ್ಯಾಹ್ನ ಸ್ಟೀವನ್ ಅವರ ಮನೆಯಲ್ಲಿ ಅಣ್ಣನ ಪುತ್ರಿಯ ವಿವಾಹ ನಿಶ್ಚಿತಾರ್ಥ ನಿಗದಿಯಾಗಿತ್ತು. ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಮನೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಮದ್ಯ ಶೇಖರಣೆ ಇರುವುದನ್ನು ಪತ್ತೆ ಹಚ್ಚಿ ಸ್ಟೀವನ್ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಕೂಡ ನಿರಾಕರಿಸಲಾಯಿತು. ಶನಿವಾರ ರಾತ್ರಿ 9 ಗಂಟೆ ವೇಳೆಗೆ ಅವರನ್ನು ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ರೀತಿ ಸ್ಟೀವನ್ ಡಿ’ಸಿಲ್ವ ಅವರು ಅನಿವಾರ್ಯವಾಗಿ ಜೈಲು ಸೇರುವಂತಾಗಿದೆ.
ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಅಧಿಕಾರಿಗಳು ಕೆಲವೊಂದು ಘಟನೆಗಳ ಬಗ್ಗೆ ಹದ್ದಿನಕಣ್ಣಿಟ್ಟಿದ್ದಾರೆ. ಚುನಾವಣ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಚುನಾವಣ ನೀತಿ ಸಂಹಿತೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇಲ್ಲದೆ ಇರುವುದರಿಂದ ಹಾಗೂ ಮಾಹಿತಿಯನ್ನು ಅಧಿಕಾರಿಗಳು ಸರಿಯಾಗಿ ನೀಡದಿರುವುದು ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ ಎಂದು ಬಂಟ್ವಾಳ ತಾ. ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳಿಗೆ ಯಾವೂದೇ ಮಾಹಿತಿಯಿಲ್ಲ. ಮಾತ್ರವಲ್ಲದೇ ಈ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಯಾವುದೇ ಮಾಹಿತಿಯಿಲ್ಲ. ಚುನಾವಣ ನೀತಿ ಸಂಹಿತೆ ಸಂದರ್ಭ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಸಂಬಂಧಿಸಿ ಮನೆಯ ಯಜಮಾನ ಜೈಲಿಗೆ ಹೋಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಇದು ಪ್ರಥಮ ಘಟನೆಯಾಗಿದೆ.
ಮಾಹಿತಿ ಕೃಪೆ ಕನ್ನಡಿಗ ವರ್ಲ್ಡ್