ದಿನೇಶ್’ರ ಯೋಗಿ ವಿರುದ್ಧ ಹೇಳಿಕೆಗೂ ‘ಮೌಲ್ವಿಯನ್ನು’ ಎಳೆದು ತಂದ ಪ್ರತಾಪ್ ಸಿಂಹ! ವೀಡಿಯೋ ವೀಕ್ಷಿಸಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು, ರಾಜಕೀಯ ಕೆಸರೆರಚಾಟ ಜಾಸ್ತಿಯಾಗುವುದು ಸಾಮಾನ್ಯ. ಇಂತಹ ಚುನಾವಣೆಯ ಸಂಧರ್ಭದಲ್ಲೇ ಉನ್ನಾವೊ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದ ನಂತರ ಬಿಜೆಪಿ ವಿರುದ್ಧ ತೀವ್ರವಾಗಿ ಪ್ರತಿಭಟನೆ ದೇಶದ್ಯಾಂತ ನಡೆದಿತ್ತು ಮತ್ತು ಅದೇ ರೀತಿ ಬೆಂಗಳೂರಿನಲ್ಲೂ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಕ್ಯಾಂಡಲ್ ಲೈಟ್ ಮಾರ್ಚ್ ಎರ್ಪಡಿಸಲಾಗಿತ್ತು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉತ್ತರ ಪ್ರದೇಶದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ಆಕೆಯ ತಂದೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿರುವ ಬಿಜೆಪಿ ಶಾಸಕನ ವಿರುದ್ಧ ಸರಿಯಾಗಿ ಕ್ರಮ ಕೈಗೊಳ್ಳದ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಅವರು ಅತ್ಯಾಚಾರದ ಆರೋಪ ಇರುವವನ ವಿರುದ್ಧ ಸರಕಾರದ ಮೃದು ಧೋರಣೆ ಖಂಡಿಸಿ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ತನ್ನ ಸಾಮಾಜಿಕ ಜಾಲತಾಣದ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಬಂದು ದಿನೇಶ್ ಗುಂಡೂರಾವ್ ಹೇಳಿಕೆ ಖಂಡಿಸುವ ನೆಪದಲ್ಲಿ ಮತ್ತೊಮ್ಮೆ ತನ್ನೊಳಗಿರುವ ಮುಸ್ಲಿಮ್ ವಿರೋಧಿ ವಿಷವನ್ನು ಕಾರಿದ್ದಾರೆ.

ದಿನೇಶ್ ಗುಂಡೂರಾವ್ ಅವರು ಮದುವೆಯಾದಾಗ ಅವರ ಹೆಂಡತಿ ತಬಸ್ಸುಮ್ ಇಸ್ಲಾಮ್ ಧರ್ಮದವರಾಗಿದ್ದರು, ಆ ಒಂದು ಅಂಶವನ್ನೇ ನೆಪವಾಗಿ ಬಳಸಿಕೊಂಡು ತನ್ನ ಫೇಸ್‌ಬುಕ್ ಲೈವ್ ವೀಡಿಯೋದಲ್ಲಿ ರಾಜಕೀಯ ಹೇಳಿಕೆಗೆ ಕೋಮುಬಣ್ಣ ಹಚ್ಚಿದ್ದಾರೆ.

‘ದಿನೇಶ್ ಗುಂಡೂರಾವ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ವಿರುದ್ಧ ತುಚ್ಚವಾದ ಹೇಳಿಕೆ ನೀಡಿದ್ದಾರೆ, ಅವರು ಯೋಗಿ ಬದಲಾಗಿ ಮೌಲ್ವಿಯ ಬಗ್ಗೆ ಮುಲ್ಲಾನ ಬಗ್ಗೆ ಈ ರೀತಿ ಹೇಳಿದ್ದರೆ ಅವರ ಹೆಂಡತಿ ಬೇಗಮ್ ತಬು ಅವರೇ ಆ ಕೆಲಸನ ನಿಮಗೆ ಮಾಡಿರುತ್ತಿದ್ದರು, ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು, ಇಲ್ಲಾಂತಂದ್ರೆ ನಿಮಗೆ ತಕ್ಕ ಉತ್ತರ ಕೊಡಬೇಕಿದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಸಂಸದ ಪ್ರತಾಪ್ ಸಿಂಹ ದಿನೇಶ್ ಗುಂಡೂರಾವ್ ಯಾಕಾಗಿ ಆ ರೀತಿ ಹೇಳಿದ್ದಾರೆ, ಯಾವ ಘಟನೆಯನ್ನು ಖಂಡಿಸುವ ಭರದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿದ್ದರೂ, ತಮ್ಮದೇ ಪಕ್ಷದ ಶಾಸಕನ ಮೇಲೆ ಅಮಾಯಕ ಯುವತಿ ಮಾಡುತ್ತಿರುವ ಅತ್ಯಾಚಾರ ಆರೋಪದ ಬಗ್ಗೆ ತುಟಿ ಪಿಟಿಕ್ ಎನ್ನದೇ ಒಬ್ಬ ರಾಜಕೀಯ ನೇತಾರ ಇನ್ನೊಬ್ಬ ರಾಜಕೀಯ ನೇತಾರನ ಕಾರ್ಯವೈಖರಿಯಲ್ಲಿ ನಡೆದ ವಿಫಲತೆಯನ್ನು ಖಂಡಿಸಿ ನೀಡಿದ ರಾಜಕೀಯ ಹೇಳಿಕೆಗೆ ಧರ್ಮವನ್ನು ಎಳೆದು ತಂದು ಉತ್ತರಿಸುತ್ತಿರುವ ಮೈಸೂರಿನ ಸಂಸದ ಪ್ರತಾಪ್ ಸಿಂಹ ತಾನೊಬ್ಬ ಜನರಿಂದ ಲೋಕಸಭೆಗೆ ಆಯ್ಕೆಯಾದ ಪ್ರತಿನಿಧಿ ಎಂಬುವುದನ್ನು ಮರೆತು ಒಂದು ಕೋಮಿನ ವಿರುದ್ಧ ಸಮಯ, ಸಂಧರ್ಭ ಸಿಕ್ಕಾಗೆಲ್ಲಾ ವಿಷ ಕಾರುವ ವ್ಯಕ್ತಿ ತರಹ ವರ್ತಿಸುವುದು ಖಂಡನೀಯ..

ಹೇಳಿದ್ದು ಕೇವಲ ಒಂದೇ ವಾಕ್ಯ.. ಆದರೆ ಅದರೊಳಗೆ ಇರುವ ಅವರ ಮನಸ್ಥಿತಿಯನ್ನು ಪ್ರಜ್ಞಾವಂತರು ಅರ್ಥಮಾಡಿಕೊಳ್ಳಬೇಕು..

Leave a Reply

Your email address will not be published. Required fields are marked *