ನನ್ನ ಮಗಳ ಹೆಸರಿನೊಂದಿಗೆ ಆಸಿಫಾ ಹೆಸರು ಸೇರಿಸುತ್ತೇನೆ: ಪ್ರತಿಭಾ ಕುಳಾಯಿ
ನ್ಯೂಸ್ ಕನ್ನಡ ವರದಿ-(16.04.18): ನನ್ನ ಮಗಳು ಪೃಥ್ವಿ ಹೆಸರಿನೊಂದಿಗೆ ಕಥುವಾ ಪ್ರಕರಣದ ಸಂತ್ರಸ್ತೆ ಅಸಿಫಾ ಹೆಸರನ್ನು ಸೇರಿಸಿ ಕರೆಯುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೇಳಿದ ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಆಸಿಫಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ತೀವೃವಾಗಿ ಖಂಡಿಸಿದರು.
ನಾನು ಹಿಂದುವಾಗಿದ್ದೇನೆ ಆದರೆ ಬಿಜೆಪಿಯ ಹಿಂದುಗಳನ್ನು ನೋಡುವಾಗ ನನಗೆ ಹಿಂದು ಎನ್ನಲು ನಾಚಿಕೆಯಾಗುತ್ತಿದೆ ಎಂದ ಅವರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯೊಂದಿಗೆ ಮಹಿಳೆಯರನ್ನು ರಕ್ಷಿಸುವ ಹೊಣೆಹೊತ್ತ ಇವರು ಪುಟ್ಟ ಬಾಲಕಿಯ ಅತ್ಯಾಚಾರ ಮಾಡುವುದರೊಂದಿಗೆ ಭಾರತ ಮಾತೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಳೆದ ಚುನಾವಣಾ ಸಂದರ್ಭದಲ್ಲಿ ಮಂಗಳೂರಿನ ಕೋಡಿಕೆರೆ ಎಂಬಲ್ಲಿಗೆ ಪ್ರಚಾರಕ್ಕಾಗಿ ಹೋದಾಗ ಕೆಲ ಹಿಂದೂ ಸಹೋದರರು ನನ್ನ ಮೇಲೆ ಹಲ್ಲೆಗೆ ಯತ್ನ ನಡೆಸಿದ ಘಟನೆ ನಡೆದಿದ್ದು, ಅವರು ನನ್ನ ಜೊತೆ ಅನಾಗರಿಕವಾಗಿ ವರ್ತಿಸಿದ್ದಾರೆ. ಈ ಬಾರಿಯ ಚುನಾವಣೆಗೆ ನಾನು ಮತ್ತೆ ಪ್ರಚಾರಕ್ಕಾಗಿ ಅದೇ ಸ್ಥಳಕ್ಕೆ ಹೋಗಲಿದ್ದು, ಆ ಘಟನೆ ಪುನರಾವರ್ತನೆಯಾಗದಿರಲೆಂದು ನಾನು ಬಯಸುತ್ತೇನೆ ಎಂದರು.