ಆಸೀಫಾ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಉಚ್ಚಿಲದಲ್ಲಿ ಬೃಹತ್ ಪ್ರತಿಭಟನೆ
ನ್ಯೂಸ್ ಕನ್ನಡ ವರದಿ-(16.04.18): ಕಾಪು: ಜಮ್ಮುವಿನ ಕಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪಾಪ್ಯುಲರ್ ಪ್ರೆಂಟ್ ಆಫ್ ಇಂಡಿಯಾ ಉಚ್ಚಿಲ ಹಾಗು ಸಾರ್ವಜನಿಕರು ಜಂಟಿಯಾಗಿ ಮೇಣದ ಬತ್ತಿ ಹಿಡಿದು ಉಚ್ಚಿಲ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪಿಎಫ್ಐ ಮುಖಂಡ ಹನೀಫ್ ಮೂಳೂರು ಮಾತನಾಡಿ, ಇಲ್ಲಿನ ರಾಜಕಾರಣಿ, ನ್ಯಾಯ ಪಾಲಕ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದರಿಂದ ಇಂತಹ ಅಮಾನವೀಯ ಘಟನೆಗಳು ಮರುಕಳಿಸುವಂತೆ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೌನ ಪ್ರತಿಭಟನೆ ಮಾಡಲಿಚ್ಚಿರುವ ನಾವು ಈ ಹಿಂದೆಯು ಗುಜರಾತಿನಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವೃದ್ಧರನ್ನು ಭೀಕರವಾಗಿ ಕೊಲೆಗೈದಾಗಲೂ ಆಸೀಫಾಳಂತಹ ಅದೆಷ್ಟೋ ಮುಗ್ದ ಹೆಣ್ಣುಮಕ್ಕಳ ಅತ್ಯಾಚಾರ ನಡೆದಾಗಲೂ ನಾವು ತಾಳ್ಮೆ ವಹಿಸಿದ್ದೆವು. ಆದರೆ ಇದೀಗ ಮುಗ್ಧ ಬಾಲಕಿ ಆಸೀಫಾಳ ಪ್ರಕರಣದಲ್ಲಿ ನಮ್ಮಲ್ಲಿ ರೋಷವನ್ನುಂಟು ಮಾಡಿದೆ ಎಂದವರು, ಆಸೀಫಾಳ ಕುಟುಂಬಕ್ಕೆ ನ್ಯಾಯ ಸಮ್ಮತ ಪರಿಹಾರ ಒದಗಿಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹನೀಫ್ ಮೂಳೂರು ಆಗ್ರಹಿಸಿದರು.
ನೂರಾರು ಜನ ಭಾಗವಹಿಸಿದ ಪ್ರತಿಭಟನೆಯಲ್ಲಿ ಪಿಎಫ್ಐ ಮುಖಂಡ ಮಜೀದ್ ಪೊಲ್ಯ,ಪಿಎಫ್ಐ ಉಚ್ಚಿಲ ವಲಯಾಧ್ಯಕ್ಷ ಷರೀಫ್ ಕರೀಂ, ತೌಫೀಕ್ ಪಡು ಉಚ್ಚಿಲ, ಯುವಕರ ಸಂಘದ ಮುಖಂಡರಾದ ರಫೀಕ್ ದೀವ್ ,ಸಿರಾಜ್ ಎನ್ .ಎಚ್ ಉಪಸ್ಥಿತರಿದ್ದರು.