ಆಟವಾಡುತ್ತಿದ್ದ ವೇಳೆ ಬಲೂನ್ ನುಂಗಿದ ಮಗು ಮೃತ್ಯು!
ನ್ಯೂಸ್ ಕನ್ನಡ ವರದಿ-(16.04.18): ಸಣ್ಣ ವಸ್ತುಗಳಾದರೂ, ಅವುಗಳ ಕುರಿತು ಜಾಗ್ರತೆ ವಹಿಸದಿದ್ದಲ್ಲಿ ಅನಾಹುತ ತಪ್ಪಿದ್ದಲ್ಲ. ಕೆಲವು ತಿಂಗಳುಗಳ ಹಿಂದೆ ಮಗುವೊಂದು ಚ್ಯೂಯಿಂಗ್ ಗಮ್ ನುಂಗಿದ ಕಾರಣದಿಂದ ಉಸಿರುಗಟ್ಟಿ ಮೃತಪಟ್ಟಿತ್ತು. ಇದೀಗ ಮಗುವೊಂದು ಆಟವಾಡುತ್ತಿದ್ದ ವೇಳೆ ಬಲೂನ್ ಅನ್ನು ನುಂಗಿದ್ದು, ಬಲೂನ್ ಗಂಟಲಿನಲ್ಲಿ ಸಿಲುಕಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಮಗು ಮೃತಪಟ್ಟ ಘಟನೆಯು ಬೆಂಗಳೂರಿನ ಹುಳಿಮಾವಿನ ಸಮೀಪದ ಕಮ್ಮನಹಳ್ಳಿಯಲ್ಲಿ ನಡೆದಿದೆ.
ನವಾಝ್(2) ಮೃತಪಟ್ಟ ಮಗು. ಇಂದು ಮಧ್ಯಾಹ್ನ ಮಗು ಮನೆಯಲ್ಲಿ ಬಲೂನ್ ಗಳೊಂದಿಗೆ ಆಟವಾಡುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಮಗು ಬಲೂನ್ ನುಂಗಿತ್ತು. ಬಳಿಕ ಮಗು ಉಸಿರಾಟದ ತೊಂದರೆ ಅನುಭವಿಸುತ್ತಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಕೂಡಲೇ ಪರಿಶೀಲನೆ ನಡೆಸಿದಾಗ ಬಲೂನ್ ನುಂಗಿದ್ದು ತಿಳಿದು ಬಂತು. ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಮಗುವನ್ನು ಕೂಡಲೇ ದಾಖಲಿಸಿದ್ದರೂ ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ತಿಳಿದು ಬಂದಿದೆ.